ಎಲ್ಲಾ ಗ್ರಾಮಗಳಿಗೂ ಸುಗಮ ರಸ್ತೆಗಳ ಮೂಲಕ ಸಾರಿಗೆ ವ್ಯವಸ್ಥೆ ಕಲ್ಪಿಸಿ: ಇಂದ್ವಾಡಿ ಶಿವಣ್ಣ
.jpg)
ಹನೂರು,ಫೆ.06: ಪಟ್ಟಣವನ್ನು ತಾಲೂಕಾಗಿ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಅಗತ್ಯವಾದ ವಿವಿಧ ಇಲಾಖೆಯ ಕಚೇರಿಗಳನ್ನು ಪ್ರಾರಂಭಿಸಬೇಕು ಮತ್ತು ಎಲ್ಲಾ ಗ್ರಾಮಗಳಿಗೂ ಸುಗಮ ರಸ್ತೆಗಳ ಮೂಲಕ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ಸಾಹಿತಿ ಇಂದ್ವಾಡಿ ಶಿವಣ್ಣ ಮನವಿ ಮಾಡಿದರು.
ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಇಂದ್ವಾಡಿ ಶಿವಣ್ಣ, ಆಡಳಿತಾತ್ಮಕ ದೃಷ್ಠಿಯಿಂದ ಹನೂರು ಪಟ್ಟಣವನ್ನು ನೂತನ ತಾಲೂಕಾಗಿ ಘೋಷಣೆ ಮಾಡಬೇಕೆಂದು ಕಳೆದ 3 ದಶಕಗಳಿಂದಲೂ ಹೋರಾಟ ನಡೆಯುತಿತ್ತು. ಇದೀಗ ಪಟ್ಟಣವು ನೂತನ ತಾಲೂಕು ಕೇಂದ್ರವಾಗಿದ್ದು, ಈ ಹಿರಿಮೆ ತಂದುಕೊಟ್ಟ ಮಾಜಿ ಸಚಿವರುಗಳಾದ ರಾಜುಗೌಡ ಮತ್ತು ನಾಗಪ್ಪ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ ಮುಡಿಗುಂಡ ವಿರುಪಾಕ್ಷಪ್ಪ, ಸೂರಾಪುರ ರಾಚೇಗೌಡ ಮತ್ತು ದೊಡ್ಡಿಂದುವಾಡಿ ವೆಂಕಟೇಗೌಡರನ್ನು ಸ್ಮರಿಸಬೇಕು ಎಂದು ತಿಳಿಸಿದರು.
ಹನೂರು ತಾಲೂಕು ಕರ್ನಾಟಕದಲ್ಲಿಯೇ ಮಾದರಿ ತಾಲೂಕಾಗಬೇಕು. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ಶಕ್ತಿಕೇಂದ್ರ, ನ್ಯಾಯಾಲಯ, ಖಜಾನೆ ಕಛೇರಿ, ಮಿನಿ ವಿಧಾನಸೌಧ, ಸಮಾಜಕಲ್ಯಾಣ ಇಲಾಖೆ, ಕೃಷ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ಅಗತ್ಯ ಇಲಾಖಾ ಕಚೇರಿಗಳನ್ನು ಪ್ರಾರಂಭಿಸಬೇಕು. ಪಟ್ಟಣದಲ್ಲಿ ಅತ್ಯಗತ್ಯವಾಗಿ ಕರಾರಸಾಸಂ ಬಸ್ ಡಿಪೋ ತೆರೆದು ಹಳ್ಳಿಹಳ್ಳಿಗೂ ಬಸ್ ಸೌಕರ್ಯಗಳ ವ್ಯವಸ್ಥೆ ಮಾಡಬೇಕು. ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟವನ್ನು ತಿರುಪತಿ ಮಾದರಿ ಅಭಿವೃದ್ಧಿಪಡಿಸುವುದು ಮತ್ತು ಪ್ರಸಿದ್ಧ ಜಲಪಾತ ಹೊಗೇನಕಲ್ಲನ್ನು ತಮಿಳನಾಡು ಮಾದರಿಯಲ್ಲಿಯೇ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿಸಬೇಕು. ಕಾವೇರಿ ನದಿಗೆ ಮೇಕೆದಾಟು ಸಮೀಪ ಸೇತುವೆ ನಿರ್ಮಾಣ ಮಾಡಿ ನೂತನ ತಾಲೂಕು ಕೇಂದ್ರ ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನ ಅಂತರವನ್ನು ಕಡಿಮೆಗೊಳಿಸಬೇಕು. ಇದರಿಂದ ವ್ಯಾಪಾರ ವಹಿವಾಟು ಅಭಿವೃದ್ಧಿಯಾಗಲಿದೆ. ಈ ಎಲ್ಲಾ ಬೇಡಿಕೆಗಳು ಪರಿಪೂರ್ಣವಾದಲ್ಲಿ ಹನೂರು ತಾಲೂಕು ನಂ.1 ತಾಲೂಕಾಗಿ ರಾಜ್ಯದಲ್ಲಿಯೇ ಮಾದರಿಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪಿ.ಮಣಿ, ಹಂಪಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಕೇಶವನ್‍ಪ್ರಸಾದ್, ವಿಶ್ರಾಂತ ಪ್ರಾಧ್ಯಾಪಕರಾದ ದೊಡ್ಡಲಿಂಗೇಗೌಡ, ಮದ್ರಾಸು ವಿಶ್ವವಿದ್ಯಾನಿಲಯದ ಪ್ರಾರ್ಧಯಾಪಕ ರಂಗಸ್ವಾಮಿ, ಕಸಾಪ ತಾಲೂಕು ಅಧ್ಯಕ್ಷ ನಂಜುಂಡಸ್ವಾಮಿ, ಹನೂರು ವಲಯದ ಅಧ್ಯಕ್ಷ ಶ್ರೀನಿವಾಸ್ ನಾಯ್ಡು, ಕರವೇ ಅಧ್ಯಕ್ಷ ವಿನೋದ್, ಕಸಾಪ ಪದಾಧಿಕಾರಿಗಳಾದ ಗುರುಸ್ವಾಮಿ, ಆಶೋಕ್, ಈರೇಂದ್ರ, ಮಧುಸೂಧನ್, ರವೀಂದ್ರ, ಮಲ್ಲಣ್ಣ ಹಾಜರಿದ್ದರು.







