ಮುಡಿಪು: ಎಸ್‌ವೈಎಸ್ ನಿಂದ ಉಚಿತ ಸಾಮೂಹಿಕ ವಿವಾಹ
ಮಂಗಳೂರು, ಫೆ. 6: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಇದರ ಮುಡಿಪು ಸೆಂಟರ್ ವತಿಯಿಂದ ಉಚಿತ ಸಾಮಾಹಿಕ ವಿವಾಹವು ಮಾರ್ಚ್ ತಿಂಗಳಲ್ಲಿ ಮುಡಿಪು ಸಾರ್ವಜನಿಕ ಮೇದಾನದಲ್ಲಿ ನಡೆಯಲಿದ್ದು, ಬಡ ಕುಟುಂಬಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮುಸ್ಲಿಂ ಸಮುದಾಯದ ಯುವಜನ ಶಕ್ತಿಯನ್ನು ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ಬಳಸುವ ಸಲುವಾಗಿ ಸ್ಥಾಪಿಸಲಾದ ಎಸ್‌ವೈಎಸ್ ಸಂಘಟನೆಯು ಹಲವಾರು ಜನಪರ ಸಮಾಜ ಸೇವೆಗಳನ್ನು ನಡೆಸಿಕೊಂಡು ಬರುತ್ತಿದ್ದು, ಆ ಪೈಕಿ ಉಚಿತ ಸಾಮೂಹಿಕ ವಿವಾಹವೂ ಒಂದು. ಸಮಾಜದಲ್ಲಿ ಬೀಡು ಬಿಟ್ಟಿರುವ ವರದಕ್ಷಿಣೆ ಎಂಬ ಕ್ರೂರ ಸಂಪ್ರದಾಯದಿಂದಾಗಿ ಸಮಾಜದ ಅಸಂಖ್ಯಾತ ಯುವತಿಯರು ಕಂಕಣ ಭಾಗ್ಯದಿಂದ ವಂಚಿತರಾಗಿದ್ದಾರೆ. ಇಂತಹ ಯುವತಿಯರ ವಿವಾಹಕ್ಕೆ ಪ್ರೋತ್ಸಾಹಿಸುವುದರೊಂದಿಗೆ ವರದಕ್ಷಿಣೆ ಸಂಪ್ರದಾಯವನ್ನು ನಿರುತ್ಸಾಹಗೊಳಿಸುವುದಕ್ಕಾಗಿ ಎಸ್‌ವೈಎಸ್‌ನ
ಘಟಕಗಳು ಉಚಿತ ಸರಳ ಸಾಮೂಹಿಕ ವಿವಾಹಗಳನ್ನು ಸಂಘಟಿಸುತ್ತಿವೆ ಎಂದು ತಿಳಿಸಿದ್ದಾರೆ.
ಮುಡಿಪು ಸೆಂಟರ್ ಎಸ್‌ವೈಎಸ್ ಕಳೆದ 7 ವರ್ಷಗಳಲ್ಲಿ 55ರಷ್ಟು ಬಡ ಯುವತಿಯ ಉಚಿತ ವಿವಾಹವನ್ನು ನಡೆಸಿ ಕೊಟ್ಟಿದೆ. ಪ್ರತಿ ವಧುವಿಗೆ 5 ಪವನ್ ಚಿನ್ನಾಭರಣ ಹಾಗೂ ವರನಿಗೆ 10 ಸಾವಿರ ರೂ. ನಗದು ಪ್ರೋತ್ಸಾಹ ಧನ, ವಧುವರರಿಗೆ ವಸ್ತ್ರ ಇತ್ಯಾದಿಗಳನ್ನನು ಉಚಿತವಾಗಿ
ನೀಡುವುದರೊಂದಿಗೆ ಉಭಯ ಕಡೆಗಳಿಂದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂಬಂಧಿಕರಿಗೆ ಊಟೋಪಚಾರ
ವ್ಯವಸ್ಥೆಗಳನ್ನು ಮಾಡುತ್ತಿದೆ. ಈ ಬಾರಿ ಕನಿಷ್ಟ 10 ಜೋಡಿ ವಿವಾಹಗಳನ್ನು ನಡೆಸಲು ಉದ್ದೇಶಿಸಲಾಗಿದ್ದು, ಬಡ ಯುವತಿಯರ ಕುಟುಂಬಗಳಿಂದ
ಅರ್ಜಿ ಆಹ್ವಾನಿಸಲಾಗಿದೆ.
ಅರ್ಹರು ಸ್ಥಳೀಯ ಜಮಾಅತ್ ಸಮಿತಿಗಳ ದೃಢೀಕರಣ ಪತ್ರದೊಂದಿಗೆ, ಕಾರ್ಯದರ್ಶಿ, ಎಸ್‌ವೈಎಸ್ ಮುಡಿಪು ಸೆಂಟರ್ ಎಂಬ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ 9964319803, 9449451103 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದ್ದು, ಅರ್ಜಿಗಳನ್ನು ಪರಿಶೀಲಿಸಿದ ಬಳಿಕ, ನೇರ ಭೇಟಿಯಾಗಿ ಅರ್ಹ ಕುಟುಂಬಗಳನ್ನು ಆರಿಸಲಾಗುವುದು. ಮಾರ್ಚ್ ತಿಂಗಳಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಮ್ಯಾರೇಜ್ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಮಧ್ಯನಡ್ಕ, ಕಾರ್ಯದರ್ಶಿ ಎಂ.ಎ ಸಿದ್ದೀಖ್ ಸಖಾಫಿ ಮೂಳೂರು, ಸಿ.ಎಚ್ ಮುಹಮ್ಮದ್ ಹಾಜಿ ಬಾಳೆಪುಣಿ,
ಮುಹಮ್ಮದ್ ಶಾಲಿಮಾರ್, ಬಶೀರ್ ಸಾಜಿಗಾರ್ ಈ ಸಂದರ್ಭ ಉಪಸ್ಥಿತರಿದ್ದರು.







