ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹರಿಯಬಿಟ್ಟಿದ್ದ ಆರೋಪಿ ಸೆರೆ
ವಿದ್ಯಾರ್ಥಿನಿಗೆ ಹಲ್ಲೆಗೈದ ಪ್ರಕರಣ

ಮಂಗಳೂರು, ಫೆ.6: ನಗರದ ಪಿಲಿಕುಳ ನಿಸರ್ಗಧಾಮದ ಮಾನಸ ವಾಟರ್ ಪಾರ್ಕ್‌ನಲ್ಲಿ ವಿಹರಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ ಘಟನೆಯ ವೀಡಿಯೊ ಮತ್ತು ವಿದ್ಯಾರ್ಥಿನಿಯರ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಆರೋಪಿಯೊಬ್ಬನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಕೊಟ್ಟಾರದ ಚೌಕಿಯಲ್ಲಿರುವ ಫೈನಾನ್ಸ್‌ವೊಂದರಲ್ಲಿ ಉದ್ಯೋಗಿಯಾಗಿರುವ ಪಚ್ಚನಾಡಿ ನಿವಾಸಿ ವಿಶಾದ್ (34) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಜ. 2ರಂದು ಪಿಲಿಕುಳ ನಿಸರ್ಗಧಾಮದ ಮಾನಸ ವಾಟರ್ ಪಾರ್ಕ್‌ಗೆ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಸಂಘ ಪರಿವಾರದ ಕಾರ್ಯಕರ್ತನೊಬ್ಬ ಪೊಲೀಸರ ಎದುರೇ ಹಲ್ಲೆ ನಡೆಸಿದ್ದ. ಇದು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂಡುಶೆಡ್ಡೆ ನಿವಾಸಿಗಳಾದ ಸಂಪತ್ ಶೆಟ್ಟಿ, ವರದಾ ಮತ್ತು ದಿನೇಶ್ ಎಂಬವರನ್ನು ಬಂಧಿಸಿದ್ದರು.
ವಿಡಿಯೋ ವೈರಲ್: ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹಲ್ಲೆ ನಡೆಸಿರುವ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಲ್ಲೆಗೊಳಗಾದ ವಿದ್ಯಾರ್ಥಿನಿಯ ಫೋಟೊ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ಮಂಗಳವಾರ ವಿಶಾದ್‌ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನವಾಗಿದೆ.





