ದಾವಣಗೆರೆ: ಪೊಲೀಸರಿಂದ ಅಮಾನವೀಯ ವರ್ತನೆ ಆರೋಪ; ಪ್ರತಿಭಟನೆ

ದಾವಣಗೆರೆ,ಫೆ.07: ಪೊಲೀಸರು ಗೋಮಾಳದಲ್ಲಿ ಬದುಕು ಕಟ್ಟಿಕೊಂಡ ಜನರನ್ನು ಒಕ್ಕಲೆಬ್ಬಿಸಲು ಲಾಠಿ ಪ್ರಹಾರ ನಡೆಸಿ, ಅಮಾನವೀಯವಾಗಿ ವರ್ತಿಸಿದ್ದನ್ನು ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು.
ಇಲ್ಲಿನ ಜಯದೇವ ವೃತ್ತದಿಂದ ಬೈಕ್ ರ್ಯಾಲಿ ನಡೆಸಿದ ಪ್ರತಿಭಟನಾ ನಿರತ ರೈತರು ನಂತರ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎದುರು ಹಳೆ ಪಿ.ಬಿ.ರಸ್ತೆ ತಡೆ ನಡೆಸುವ ಮೂಲಕ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ಹರಿಹರ ತಾಲೂಕಿನ ಬುಳ್ಳಾಪುರ ಗ್ರಾಮದ ಗೋಮಾಳದಲ್ಲಿ ಮನೆ ಕಟ್ಟಿಕೊಂಡಿದ್ದ ಬಡ ರೈತರು, ಕೂಲಿ ಕಾರ್ಮಿಕರನ್ನು ಮಂಗಳವಾರ ಬೆಳಿಗ್ಗೆ ಒಕ್ಕಲೆಬ್ಬಿಸಲು ಪೊಲೀಸ್ ಬಲ ಪ್ರದರ್ಶಿಸುವ ಮೂಲಕ ಜಿಲ್ಲಾಡಳಿತ ಮಾನವೀಯತೆಯನ್ನೇ ಮರೆತಂತೆ ವರ್ತಿಸಿದೆ. ಜಿಲ್ಲಾಡಳಿತ ಮನಸ್ಸು ಮಾಡಿದ್ದರೆ ಕಾನೂನುಬದ್ಧವಾಗಿ ಗೋಮಾಳದಲ್ಲಿ 4-5 ಎಕರೆಯಲ್ಲಿ ರಾಜೀವ್‍ಗಾಂಧಿ ವಸತಿ ನಿಗಮದಿಂದ ಮನೆ, ನಿವೇಶನ ನೀಡಬಹುದಿತ್ತು ಎಂದು ಅವರು ತಿಳಿಸಿದರು.
ಹರಿಹರ ತಹಸೀಲ್ದಾರ್, ಉಪ ವಿಭಾಗಾಧಿಕಾರಿಗಳು ತಮ್ಮ ಆದೇಶ ಪಾಲನೆಗೆ ಪೊಲೀಸರನ್ನು ಬಳಸಿಕೊಂಡು ದೌರ್ಜನ್ಯ ಎಸಗಿದ್ದಾರೆ. ಜೆಸಿಬಿ ಮುಖಾಂತರ ಬಡವರ ಮನೆಗಳನ್ನೇ ನಾಶ ಮಾಡಿದ್ದಾರೆ. ಅಲ್ಲಿನ ನಿವಾಸಿಗಳು ತಹಸೀಲ್ದಾರ್, ಎಸಿ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ನಿಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದರೇ, ಉದ್ವಿಗ್ನ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತೆ, ಯಾವ ಕಾರಣಕ್ಕೆ ಲಾಠಿ ಚಾರ್ಜ್ ಮಾಡಲಾಯಿತು ಎಂಬುವುದಕ್ಕೆ ಜಿಲ್ಲಾಡಳಿತ ಉತ್ತರಿಸಲಿ ಎಂದು ಅವರು ಆಗ್ರಹಿಸಿದರು.
ದಾವಣಗೆರೆ ಜಿಲ್ಲೆಯ ನಗರ ಪ್ರದೇಶದಲ್ಲೂ ಸರ್ಕಾರಿ ಜಾಗ ಒತ್ತುವರಿಯಾಗಿದೆ. ಅದನ್ನು ಜಿಲ್ಲಾಡಳಿತ ಯಾವಾಗ ತೆರವುಗೊಳಿಸುತ್ತದೆ ? ನೀವು ಅರಣ್ಯ ಇಲಾಖೆಗೆ ಸೇರಿದ ಜಮೀನು, ಗೋಮಾಳದ ಜಮೀನು ಎಂಬುದಾಗಿ 2 ವರ್ಷದಿಂದ ಇಲಾಖೆಗೆ ಪತ್ರ ಬರೆದಿದ್ದರೂ, ನಿಮಗೆ ಉತ್ತರ ಬಂದಿಲ್ಲ. ವಾಸ್ತವ ಹೀಗಿದ್ದರೂ ಜಿಲ್ಲಾಧಿಕಾರಿ ಮೌನವಹಿಸಿರುವುದು ಏಕೆ ? ಅರಣ್ಯ ಹಕ್ಕು ಕಾಯ್ದೆ ಮುಖಾಂತರ ಹಕ್ಕು ಮಾನ್ಯತೆ ಮಾಡಲು ಉಪ ವಿಭಾಗಾಧಿಕಾರಿ ಸಭೆ ನಡೆಸಿಲ್ಲ ಎಂದು ಅವರು ದೂರಿದರು.
ಪರಿಶಿಷ್ಟ ವರ್ಗದ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮರ್ಪಕವಾಗಿ ಹಕ್ಕುಪತ್ರ ನೀಡುತ್ತಿಲ್ಲ. ಸರ್ವೇ ಇಲಾಖೆ ಅಧಿಕಾರಿಗಳು ಅರಣ್ಯ ಭೂಮಿ ಸಾಗುವಳಿ ಮಾಡಿದರೆ ಸರ್ವೇ ಮಾಡಲು ಹೋದವರು ಕೇವಲ 20 ಗುಂಟೆಯೆಂಬುದು ಜಿಪಿಎಸ್ ಮಾಡುತ್ತಿದ್ದಾರೆ. ಜಿಲ್ಲೆಗೆ ಸಮರ್ಪಕವಾಗಿ ಬೆಳೆ ವಿಮೆ ಬಂದಿಲ್ಲ. ಸೈನಿಕ ಹುಳು ಬಾಧೆಯಿಂದ ನಷ್ಟಕ್ಕೆ ತುತ್ತಾದ ರೈತರಿಗೆ ಪರಿಹಾರ ನೀಡಿಲ್ಲ. ಟ್ರ್ಯಾಕ್ಟರ್ ಜಪ್ತು, ಬಲವಂತದ ಸಾಲ ವಸೂಲಿ ನಡೆದಿದೆ. ಇದಕ್ಕೆ ಜಿಲ್ಲಾಡಳಿತ ಸ್ಪಂದಿಸಬೇಕೆ ಹೊರತು, ಬಡವರನ್ನು ಒಕ್ಕಲೆಬ್ಬಿಸುವುದಕ್ಕಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಹರಸನಾಳು ಸಿದ್ದಪ್ಪ, ಯಲೋದಹಳ್ಳಿ ರವಿಕುಮಾರ, ಆಲೂರು ಪರಶುರಾಮ, ಪಣಿಯಾಪುರ ಬಸವರಾಜ, ಗುಮ್ಮನೂರು ಬಸವರಾಜ, ನಾಗನೂರು ನಾಗೇಂದ್ರಪ್ಪ, ಓಂಕಾರ ನಾಯ್ಕ, ಕಲ್ಕೆರೆ ಅಣ್ಣಪ್ಪ, ಕೃಷ್ಣಮೂರ್ತಿ, ಹುಚ್ಚವ್ವನಹಳ್ಳಿ ಪ್ರಕಾಶ ಹಾಗೂ ಇತರರಿದ್ದರು.







