ಕಲ್ಲಿಕೋಟೆ-ಮೈಸೂರು ರೈಲ್ವೆ ಯೋಜನೆಗೆ ಒಪ್ಪಿಗೆ ನೀಡಿಲ್ಲ: ಸಚಿವ ದೇಶಪಾಂಡೆ

ಬೆಂಗಳೂರು, ಫೆ. 7: ಕೇರಳ ಕಲ್ಲಿಕೋಟೆಯಿಂದ ಮೈಸೂರು-ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲಕ ಹಾದುಹೋಗುವ ರೈಲ್ವೆ ಯೋಜನೆಗೆ ಯಾವುದೇ ಕಾರಣಕ್ಕೆ ರಾಜ್ಯ ಸರಕಾರ ಒಪ್ಪಿಗೆ ನೀಡುವುದಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.
ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಕೆ.ಜಿ. ಬೋಪಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೊಡಗಿನಲ್ಲಿ ಆನೆ ಕಾರಿಡಾರ್ ಹಾದು ಹೋಗುವುದರಿಂದ ರೈಲ್ವೆ ಯೋಜನೆಯನ್ನು ಕೈಗೆತ್ತಿಕೊಂಡರೆ ವನ್ಯಜೀವಿಗಳಿಗೆ ಹಾಗೂ ಪರಿಸರಕ್ಕೆ ತೊಂದರೆಯಾಗುತ್ತದೆ. ಈ ವಿಚಾರವನ್ನು ಕೇಂದ್ರದ ಗಮನಕ್ಕೆ ತರಲಾಗಿದೆ. ಇದುವರೆಗೂ ಯಾವುದೇ ರೈಲ್ವೆ ಯೋಜನೆ ಕೈಗೆತ್ತಿಕೊಳ್ಳಲು ಸರಕಾರ ಒಪ್ಪಿಗೆ ನೀಡಿಲ್ಲ. ಈ ರೈಲ್ವೆ ಯೋಜನೆ ಕೈಗೆತ್ತಿಕೊಳ್ಳಲು ಸ್ಥಳೀಯರ ವಿರೋಧವಿದೆ. ಇದನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.
ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಸಭೆಗಳು ನಡೆದಿದ್ದು, ಆ ಸಭೆಗಳಲ್ಲಿ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಆದರೆ, ಅದು ಯೋಜನೆಗಳಿಗೆ ಒಪ್ಪಿಗೆ ನೀಡಿದಂತೆ ಅಲ್ಲ. ಕೇರಳದ ಕಲ್ಲಿಕೋಟೆಯಿಂದ ಮೈಸೂರಿಗೆ ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲಕ ಹಾದುಹೋಗುವ ರೈಲ್ವೆ ಯೋಜನೆಗೆ ಸರಕಾರ ಒಪ್ಪಿಗೆ ನೀಡಿಲ್ಲ ಎಂದರು.





