900 ಮೆಗಾವ್ಯಾಟ್ ವಿದ್ಯುತ್ ಖರೀದಿ: ಡಿ.ಕೆ.ಶಿವಕುಮಾರ್
ಬೇಸಿಗೆಯಲ್ಲಿ ವಿದ್ಯುತ್ ಕೊರತೆ ಕಾಡದಂತೆ ಕ್ರಮ

ಬೆಂಗಳೂರು, ಫೆ.7: ಈ ಬೇಸಿಗೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಕೊರತೆ ಕಾಡದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುನ್ನೆಚ್ಚರಿಕೆಯಾಗಿ 900 ಮೆಗಾವ್ಯಾಟ್ ವಿದ್ಯುತ್‌ನ್ನು ಪ್ರತಿ ಯೂನಿಟ್‌ಗೆ 4.09 ಪೈಸೆ ನೀಡಿ ಖರೀದಿಸಲಾಗುತ್ತಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಬುಧವಾರ ನಗರದ ಎಂ.ಜಿ.ರಸ್ತೆಯ ಬೆಸ್ಕಾಂ ಇ ಘಟಕದಲ್ಲಿ ಗ್ರಾಹಕರಿಗೆ ವಿದ್ಯುತ್ ಸಂಪರ್ಕ, ಮೀಟರ್ ಅಳವಡಿಕೆ ಸೇರಿದಂತೆ ವಿದ್ಯುತ್ ಸಂಬಂಧಿತ ಸೇವೆಗಳು ತ್ವರಿತವಾಗಿ ಸಿಗಲು ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಬೆಸ್ಕಾಂ ವತಿಯಿಂದ ಗ್ರಾಹಕ ಸ್ನೇಹಿ ಸವಿಕಿರಣ(ಆನ್‌ಲೈನ್ ಫಾಸ್ಟ್ ಟ್ರಾಕ್ ಸೆಂಟರ್) ಸೇವಾ ಕೇಂದ್ರವನ್ನು ಆರಂಭಿಸಿ ಆವರು ಮಾತನಾಡಿದರು.
ರಾಜ್ಯದ ಯಾವುದೇ ಎಸ್ಕಾಂಗಳು ನಷ್ಟದಲ್ಲಿ ಇಲ್ಲ. ಯಾವುದೇ ವಿದ್ಯುತ್ ಸರಬರಾಜು ಘಟಕಗಳು ನಷ್ಟದಲ್ಲಿಲ್ಲ. ರಾಜ್ಯದ ಎಲ್ಲ ಎಸ್ಕಾಂಗಳು ಟಾಪ್ ಹತ್ತರ ಸ್ಥಾನದಲ್ಲಿವೆ. ಇಂಧನ ಇಲಾಖೆಯ ವ್ಯಾಪ್ತಿಯಲ್ಲಿ ಇದುವರೆಗೂ 23 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದೆ. ಖಾಲಿ ಉಳಿದಿರುವ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.
49 ಉಪ ವಿಭಾಗಗಳಲ್ಲಿ ಕಾರ್ಯಾರಂಭ: ನಗರದಲ್ಲಿರುವ ಬೆಸ್ಕಾಂನ 49 ಉಪ ವಿಭಾಗಗಳಲ್ಲಿ ಸವಿಕಿರಣ ಸೇವೆಯನ್ನು ಆರಂಭಿಸಿದೆ. ಮಾ.1ರ ವೇಳೆಗೆ ಬೆಂಗಳೂರು ಹಾಗೂ ಚಿತ್ರದುರ್ಗಾ ಜಿಲ್ಲೆಗಳಿಗೆ ಈ ಸೇವೆ ವಿಸ್ತರಿಸಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲ ಎಸ್ಕಾಂಗಳಿಗೆ ಈ ಸೇವೆಯನ್ನು ವಿಸ್ತರಿಸುವ ಗುರಿ ಇದೆ ಎಂದು ಹೇಳಿದರು.
ವಿದ್ಯುತ್ ಸಂಪರ್ಕ, ಮೀಟರ್ ಅಳವಡಿಕೆ, ಹೆಸರು ಬದಲಾವಣೆ, ಜಕಾತಿ ಬದಲಾವಣೆ ಸಂಬಂಧಿತ ಸೇವೆಗಳನ್ನು ತ್ವರಿತಗತಿಯಲ್ಲಿ ಪಡೆಯಲು ಸವಿಕಿರಣಕ್ಕೆ ಆನ್‌ಲೈನ್ ಮೂಲಕ ಗ್ರಾಹಕರು ತಮ್ಮ ಸ್ವವಿವರ ಸಲ್ಲಿಸಿ ಸೇವೆಯನ್ನು ಪಡೆಯಬಹುದು ಎಂದು ತಿಳಿಸಿದರು.
ಈ ಹಿಂದೆ ಬೆಸ್ಕಾಂ ಸೇವೆಗಳು ಹಾಗೂ ಸಹಾಯ ಪಡೆಯಲು ಮಧ್ಯವರ್ತಿಗಳ ಮೂಲಕವೇ ಕೆಲಸ ನಡೆಯುತ್ತಿತ್ತು. ಇದರಿಂದ ಗ್ರಾಹಕರಿಗೆ ಸೇವೆಗಳನ್ನು ಪಡೆಯುವಲ್ಲಿ ವಿಳಂಬದ ಕಿರಿಕಿರಿಯ ಜತೆಯಲ್ಲಿ ಕಮೀಷನ್ ನೀಡಬೇಕಿತ್ತು. ಆದರೆ, ಇನ್ನು ಮುಂದೆ ಇವೆಲ್ಲದಕ್ಕೂ ಕಡಿವಾಣ ಬೀಳಲಿದ್ದು, ಸವಿಕಿರಣ ಸೇವೆಯ ಮೂಲಕ ಆನ್‌ಲೈನ್ ಮೂಲಕ ಸ್ವವಿವರ ದಾಖಲಾತಿಗಳನ್ನು ನೇರವಾಗಿ ಸಲ್ಲಿಸಿ ಬೆಸ್ಕಾಂ ಸೇವೆಗಳನ್ನು ಪಡೆಯಬಹುದು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಶಾಸಕ ಎನ್.ಎ.ಹಾರಿಸ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.







