ಶ್ರವಣದೋಷವುಳ್ಳವರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಧರಣಿ

ಬೆಂಗಳೂರು, ಫೆ.7: ಶ್ರವಣದೋಷ ಉಳ್ಳವರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಪದವಿ ವ್ಯಾಸಂಗ ಮಾಡಿರುವ ಶ್ರವಣ ದೋಷವುಳ್ಳ ನೂರಾರು ಮಂದಿ ನಿರುದ್ಯೋಗಿಗಳಿಂದು ಕೆಲಸವಿಲ್ಲದೆ ಅಲೆಯುತ್ತಿದ್ದಾರೆ. ಆದುದರಿಂದ ಅಂತಹವರಿಗೆ ಸರಕಾರಿ ಕಚೇರಿಗಳು ಮಾತ್ರವಲ್ಲದೆ ಖಾಸಗಿ ಉದ್ದಿಮೆಗಳಲ್ಲೂ ಸಿ ಮತ್ತು ಡಿ ದರ್ಜೆಯ ಹುದ್ದೆಗಳನ್ನು ಮೀಸಲಿಡುವಂತೆ ಚರ್ಚಿಸಿ, ಆದೇಶಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಗಣೇಶ್ ರಾವ್, ಶ್ರವಣಮಾಂದ್ಯರ ದಿನಾಚರಣೆಯಂದು ಅವರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಲು ಈ ಧರಣಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ನೆಪಕ್ಕೆ ಉದ್ಯೋಗಮೇಳ ನಡೆಸಲಾಗುತ್ತದೆ. ಈ ವೇಳೆ ಹೊರರಾಜ್ಯದವರನ್ನು ಆಯ್ಕೆ ಮಾಡಿ, ಸ್ಥಳೀಯರಿಗೆ ಅನ್ಯಾಯ ಮಾಡಲಾಗುತ್ತಿದೆ. ಹಾಗಾಗಿ ಮೊದಲು ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಅಂಗವಿಕಲ ಮೀಸಲಾತಿ ಅನುಪಾತ ಶೇ.3ರಷ್ಟಿದ್ದು, ಈ ಮೀಸಲಾತಿಯಿಂದ ಯಾವುದೇ ಪ್ರಯೋಜನವಿಲ್ಲ. ಮೀಸಲಾತಿಯಲ್ಲಿ ಸಾಕಷ್ಟು ಅನ್ಯಾಯ ಆಗುತ್ತಿದ್ದು, ಅದನ್ನು ತಡೆಗಟ್ಟಬೇಕು ಹಾಗೂ ಮೀಸಲಾತಿಯನ್ನು ಶೇ.20ಕ್ಕೆ ಹೆಚ್ಚಿಸಬೇಕು. ವಯೋಮಿತಿಯನ್ನು 45 ವರ್ಷಕ್ಕೆ ಹೆಚ್ಚಿಸಬೇಕು ಎಂದರು.
ಶ್ರವಣದೋಷವುಳ್ಳ ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ಸನ್ನೆಯಿಂದ ಪಾಠ ಮಾಡಬೇಕು. ಆದರೆ, ಆ ರೀತಿ ಕೆಲಸ ಮಾಡುವ ಶಿಕ್ಷಕರ ಸಂಖ್ಯೆ ಕಡಿಮೆ ಇದೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು ಹಾಗೂ ಈ ಮೂಲಕ ಶಿಕ್ಷಕರ ಕೊರತೆ ನೀಗಿಸಬೇಕು. ಈ ಮೂಲಕ ಮಕ್ಕಳು ವಿದ್ಯೆಯಿಂದ ವಂಚಿತರಾಗುವುದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.
ಅಂಗವಿಕಲ ದಂಪತಿಗಳಿಗೆ ನೀಡುತ್ತಿರುವ ವಿವಾಹ ಪ್ರೋತ್ಸಾಹ ಧನವನ್ನು ಶ್ರವಣಮಾಂದ್ಯ ದಂಪತಿಗೂ ವಿಸ್ತರಿಸಬೇಕು ಹಾಗೂ ಅವಿವಾಹಿತ ಶ್ರವಣಮಾಂದ್ಯರಿಗೂ ಇಂತಹ ಸೌಲಭ್ಯ ನೀಡಬೇಕು. ಅವರಿಗೆ ನೀಡುವ ಪಿಂಚಣಿ ಹಣವನ್ನು ಬ್ಯಾಂಕ್‌ನ ಖಾತೆಗೆ ನೇರವಾಗಿ ಜಮಾ ಮಾಡುವ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ದೇವರಾಜ್, ಕೆ.ಎಚ್.ಶಂಕರ್ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಸದಸ್ಯರು ಹಾಗೂ ಶ್ರವಣದೋಷವುಳ್ಳ ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬೇಡಿಕೆಗಳು: ಸ್ವಯಂ ಉದ್ಯೋಗ ಮಾಡಲು ಶ್ರವಣದೋಷವುಳ್ಳವರಿಗೆ ರಿಯಾಯಿತಿ ದರದಲ್ಲಿ ಸಹಾಯಧನ ನೀಡಬೇಕು. ಸರಕಾರಿ ಬಸ್, ರೈಲ್ವೆ ಪಾಸ್‌ನಲ್ಲಿ ಮೀಸಲಾತಿ ಕಲ್ಪಿಸಬೇಕು. ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕು. ಪಿತ್ರಾರ್ಜಿತ ಆಸ್ತಿಯಲ್ಲಾಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.







