ಇಂದ್ರಾಣಿ ಮುಖರ್ಜಿಗೆ ನ್ಯಾಯಾಂಗ ಬಂಧನ

ಹೊಸದಿಲ್ಲಿ, ಫೆ.7: ಶೀನಾ ಬೋರ ಹತ್ಯಾ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿಗೆ ವಿಶೇಷ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.
ಮುಂದಿನ ವಿಚಾರಣೆಗೆ ಮುಖರ್ಜಿಯ ಕಸ್ಟಡಿಯ ಅಗತ್ಯವಿಲ್ಲ ಎಂದು ಸಿಬಿಐ ತಿಳಿಸಿದ ಕಾರಣ ವಿಶೇಷ ಸಿಬಿಐ ನ್ಯಾಯಾಧೀಶರಾದ ಸುನೀಲ್ ರಾಣಾ ಅವರು ಇಂದ್ರಾಣಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಇಂಕ್ಸ್ ಮೀಡಿಯಾ ಎಂಬ ಸಂಸ್ಥೆಯ ಸ್ಥಾಪಕರಲ್ಲಿ ಇಂದ್ರಾಣಿ ಮುಖರ್ಜಿ ಒಬ್ಬರಾಗಿದ್ದಾರೆ. ಸದ್ಯ ಈ ಸಂಸ್ಥೆಯ ಪ್ರಕರಣಕ್ಕೆ ಸಂಬಂಧಿಸಿ ಆಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮೌರಿಷಿಯಸ್‌ನಿಂದ ಬಂಡವಾಳವನ್ನು ಪಡೆದುಕೊಳ್ಳುವ ವೇಳೆ ಇಂಕ್ಸ್ ಮೀಡಿಯವು ಎಫ್‌ಐಪಿಬಿ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ.
ಎರಡು ದಿನಗಳಿಂದ ಸಿಬಿಐ ವಶದಲ್ಲಿದ್ದ ಇಂದ್ರಾಣಿಯವರನ್ನು ಬುಧವಾರ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಅವರನ್ನು ಬುಧವಾರ ಸಂಜೆಯೇ ಮುಂಬೈಗೆ ಕೊಂಡೊಯ್ಯಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Next Story





