ಕಾಂಗ್ರೆಸ್ ಭವಿಷ್ಯ ನಿರ್ಧರಿಸುವವರು ಮೋದಿ, ಅಮಿತ್ ಶಾ ಅಲ್ಲ: ಸಿ.ಎಂ ಸಿದ್ದರಾಮಯ್ಯ

ಬೆಂಗಳೂರು, ಫೆ. 7: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯವನ್ನು ನಿರ್ಧರಿಸುವವರು ಜನತೆಯೇ ಹೊರತು, ಪ್ರಧಾನಿ ಮೋದಿ ಅಥವಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯಲ್ಲಿ ಪ್ರಧಾನಿ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಬುಧವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅಥವಾ ಅಮಿತ್ ಶಾ ಹೇಳಿದಾಕ್ಷಣ ಕಾಂಗ್ರೆಸ್ ಪಕ್ಷದ ಭವಿಷ್ಯ ನಿರ್ಧಾರವಾಗುವುದಿಲ್ಲ. 2019ಕ್ಕೆ ಇವರು ಎಲ್ಲಿರುತ್ತಾರೆ ಅನ್ನೋದನ್ನು ಮೊದಲು ತಿಳಿದುಕೊಳ್ಳಲಿ. ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂಬುವುದು ಬಿಜೆಪಿಯವರ ಭ್ರಮೆಯಷ್ಟೇ ಎಂದು ಟೀಕಿಸಿದರು.
ರಾಜಕೀಯ ಮಾಡೋದಕ್ಕೆ ಬೇರೆ-ಬೇರೆ ವೇದಿಕೆಗಳಿವೆ ಎಂಬುದನ್ನು ಬಿಜೆಪಿ ಮುಖಂಡರು ತಿಳಿದುಕೊಳ್ಳಬೇಕು. ಬೆಂಗಳೂರಿಗೆ ಪ್ರಧಾನಿ ಮೋದಿ ಬಂದಾಗ ಬರ ಮಾಡಿಕೊಳ್ಳಲಿಲ್ಲ ಎನ್ನುತ್ತಾರೆ. ಅವರು ಬಂದಿದ್ದು ತಮ್ಮ ಪಕ್ಷದ ಕಾರ್ಯಕ್ರಮಕ್ಕೆ, ಈ ಹಿಂದೆ ಹಲವು ಬಾರಿ ಪ್ರಧಾನಿ ಮೋದಿಯವರು ಬೆಂಗಳೂರಿಗೆ ಬಂದಾಗ ನಾನು ಬರಮಾಡಿಕೊಂಡಿರಲಿಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
‘ಪ್ರತ್ಯೇಕ ಕನ್ನಡ ಧ್ವಜ ಕುರಿತಾದ ವರದಿ ನನ್ನ ಕೈ ಸೇರಿದೆ. ಈ ವರದಿ ಪರಿಶೀಲಿಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’
-ಸಿದ್ದರಾಮಯ್ಯ, ಮುಖ್ಯಮಂತ್ರಿ







