ಮದುವೆಯಾದ ಮರುದಿನವೇ ಯುವಕ ಆತ್ಮಹತ್ಯೆ!
ಡೆತ್ ನೋಟ್ ನಲ್ಲಿ ಇದ್ದದ್ದೇನು?

ಚಿಕ್ಕಬಳ್ಳಾಪುರ,ಫೆ.07: ಮದುವೆಯಾದ ಮರು ದಿನವೇ ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸೂಲಿಕುಂಟೆ ಗ್ರಾಮದಲ್ಲಿ ಮಂಗಳವಾರ ನಡೆದಿದ್ದು, ಮುನಿರಾಜು ಎಂಬಾತನೇ ಆತ್ಮ ಹತ್ಯೆ ಮಾಡಿಕೊಂಡ ಯುವಕ ಎಂದು ತಿಳಿದು ಬಂದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರದಲ್ಲಿ ಲೈನ್ ಮ್ಯಾನ್ ಆಗಿದ್ದ ಮುನಿರಾಜುವಿಗೆ ಸೋಮವಾರ ಚಿಕ್ಕಬಳ್ಳಾಪುರದ ಗುರುರಾಜ ಕಲ್ಯಾಣ ಮಂಟಪದಲ್ಲಿ ತನ್ನ ಅಕ್ಕನ ಮಗಳ ಜೊತೆ ಮದುವೆಯಾಗಿದ್ದು, ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಲವಂತದ ಮದುವೆಯೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ.
ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ
ಮುನಿರಾಜು ಬರೆದಿಟ್ಟಿರುವ ಡೆತ್‍ನೋಟ್‍ನಲ್ಲಿ ಎಲ್ಲರೂ ನನ್ನನ್ನು ಕ್ಷಮಿಸಿ. ಅನಿವಾರ್ಯ ಕಾರಣದಿಂದ ಮದುವೆಯಾಗಿದ್ದು, ಹುಡುಗಿಗೆ ಆಗಿರುವ ಅನ್ಯಾಯ ಸರಿಪಡಿಸಲು ಎಲ್ಲರೂ ಮುಂದಾಗಬೇಕೆಂದು ಕೋರಿದ್ದಾನೆ.
ಅಲ್ಲದೆ 'ಹುಡುಗಿ ಜೊತೆ ನೆಮ್ಮದಿಯ ಜೀವನ ನಡೆಸಲು ನನ್ನಿಂದ ಸಾಧ್ಯವಿಲ್ಲ. ಜೀವನ ಪರ್ಯಂತ ಕೊರಗುವುದಕ್ಕಿಂತ ಒಂದೇ ಸಲ ಸಾಯೋದು ಉತ್ತಮ ಎಂಬ ನಿರ್ಧಾರ ನನ್ನದಾಗಿದ್ದು, ಪತ್ನಿಯನ್ನು ನನ್ನ ತಮ್ಮನಿಗೆ ನೀಡಿ ಮರು ಮದುವೆ ಮಾಡಿ. ಮದುವೆಗೆ ಮುಂಚೆಯೇ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ, ಆದರೆ ನೆಂಟರಿರುವ ಕಾರಣ ಸಾಧ್ಯವಾಗಲಿಲ್ಲ ಎಂದು ಮುನಿರಾಜು ಡೆತ್‍ನೋಟ್‍ನಲ್ಲಿ ತಿಳಿಸಿದ್ದಾನೆ.







