ಪೃಥ್ವಿ-2 ಉಡಾವಣೆ

ಬಾಲಸೂರ್, ಫೆ. 7: ಪ್ರಕ್ಷೇಪಕ ಕ್ಷಿಪಣಿ ಪೃಥ್ವಿ-2 ಅನ್ನು ಒರಿಸ್ಸಾ ಕರಾವಳಿಯಿಂದ ಬುಧವಾರ ಉಡಾಯಿಸಲಾಯಿತು. ದೇಶಿ ನಿರ್ಮಿತ, 350 ಕಿ.ಮೀ. ದೂರ ದಾಳಿ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿಯನ್ನು ಬಾಲಸೂರ್ ಜಿಲ್ಲೆಯ ಅಬ್ದುಲ್ ಕಲಾಂ ಐಲ್ಯಾಂಡ್‌ನ ಸಮಗ್ರ ಪರೀಕ್ಷಾ ವಲಯದಿಂದ ಪರೀಕ್ಷಾರ್ಥ ಉಡಾಯಿಸಲಾಯಿತು.
ತುರ್ತು ಕರೆ ಬಂದಾಗ ಈ ಕ್ಷಿಪಣಿ ಉಡಾಯಿಸಲು ಸಿದ್ಧವಿರುವುದನ್ನು ದೃಢೀಕರಿಸಲು ಬಳಕೆದಾರರ ತರಬೇತಿ ಅಭ್ಯಾಸದ ಒಂದು ಭಾಗವಾಗಿ ಭಾರತೀಯ ಸೇನೆಯ ಎಸ್‌ಎಫ್‌ಸಿ ಈ ಪರೀಕ್ಷಾರ್ಥ ಪ್ರಯೋಗ ಆಯೋಜಿಸಿತ್ತು.
ಈ ಕ್ಷಿಪಣಿಯನ್ನು ಈಗಾಗಲೇ ಸೇನಾ ಪಡೆಗೆ ನಿಯೋಜಿಸಲಾಗಿದೆ. ಈ ಕ್ಷಿಪಣಿ 80 ಡಿಗ್ರಿ ಕೋನದಲ್ಲಿ ಚಿಮ್ಮುವ ಸಾಮರ್ಥ್ಯ ಹೊಂದಿದೆ ಹಾಗೂ ದ್ರವೀಕೃತ ನೋದನ ಶಕ್ತಿಯ 500 ಕಿ.ಗ್ರಾಂ. ಸಿಡಿತ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಘಟನೆ ತನ್ನ ಮಹತ್ವಾಕಾಂಕ್ಷೆಯ ಸಮಗ್ರ ಮಾರ್ಗದರ್ಶನದ ಕ್ಷಿಪಣಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಮೊದಲ ಬಾರಿಗೆ ಅಭಿವೃದ್ಧಿ ಪಡಿಸಿದ ಕ್ಷಿಪಣಿ ಪೃಥ್ವಿ.
Next Story





