ಕಬ್ಬಿಣದ ಅದಿರು ಗಣಿಗಾರಿಕೆ ಪರವಾನಿಗೆ ನವೀಕರಣ ರದ್ದುಪಡಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಫೆ. 7: ಗೋವಾ ರಾಜ್ಯ ಸರಕಾರ ಗುತ್ತಿಗೆಯನ್ನು ಎರಡನೇ ಬಾರಿ ನವೀಕರಿಸಿರುವುದನ್ನು ಸುಪ್ರೀಂ ಕೋರ್ಟ್ ಬುಧವಾರ ರದ್ದುಪಡಿಸಿರುವು ದರಿಂದ ಗೋವಾದಲ್ಲಿ ಕಾರ್ಯರ್ನಿವರ್ಹಿಸುತ್ತಿರುವ ಗಣಿಗಾರಿಕೆ ಕಂಪೆನಿಗಳಿಗೆ ತೀವ್ರ ಹಿನ್ನಡೆ ಉಂಟಾಗಿದೆ.
ಗೋವಾದಲ್ಲಿರುವ ಹೆಚ್ಚುಕಡಿಮೆ ಎಲ್ಲ ಕಂಪೆನಿಗಳು ಕೂಡ ಎರಡನೇ ಬಾರಿ ನವೀಕರಿಸಲಾದ ಪರವಾನಿಗೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಸುಪ್ರೀಂ ಕೋರ್ಟ್‌ನ ಆದೇಶ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಬ್ಬಿಣ ಅದಿರು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿದೆ.
ನ್ಯಾಯಮೂರ್ತಿ ಮದನ್ ಬಿ. ಲೋಕುರ್ ಹಾಗೂ ದೀಪಕ್ ಗುಪ್ತಾ ಅವರನ್ನು ಒಳಗೊಂಡ ಪೀಠ, ಸುಪ್ರೀಂ ಕೋರ್ಟ್‌ನ ಈ ಹಿಂದಿನ ಆದೇಶ ಹಾಗೂ ಕಾನೂನು ಉಲ್ಲಂಘಿಸಿ ಗೋವಾ ರಾಜ್ಯ ಸರಕಾರ ಕಂಪೆನಿಗಳಿಗೆ ನೀಡಿದ ಕಬ್ಬಿಣ ಅದಿರು ಗಣಿಗಾರಿಕೆ ಪರವಾನಿಗೆ ನವೀಕರಿಸಿದೆ. ಹರಾಜು ಪ್ರಕ್ರಿಯೆ ಮೂಲಕ ಹೊಸ ಪರವಾನಿಗೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ನಿರ್ದೇಶಿಸಿತ್ತು.
ನಿಯಮ ಉಲ್ಲಂಘಿಸಿ ಅದಿರು ಪ್ರತ್ಯೇಕಿಸಲು ಅನುಮತಿ ಪಡೆದ ಗಣಿಗಾರಿಕೆ ಕಂಪೆನಿಗಳಿಂದ ಶುಲ್ಕ ಸಂಗ್ರಹಿಸಲು ಚಾರ್ಟರ್ಡ್ ಅಕೌಂಟೆಂಟ್ ಒಳಗೊಂಡ ಸಿಟ್ ರೂಪಿಸಲು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಪರಿಸರಕ್ಕೆ ಸಂಬಂಧಿಸಿದ ಹೊಸ ಅನುಮತಿಯನ್ನು ಕಂಪೆನಿಗಳಿಗೆ ನೀಡುವಂತೆ ಕೂಡ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.
ಗೋವಾ ಸರಕಾರ 2015ರಲ್ಲಿ 20 ವರ್ಷಕ್ಕೆ ಸುಮಾರು 88 ಗಣಿಗಾರಿಕೆಗಳನ್ನು ಗುತ್ತಿಗೆಯನ್ನು ಎರಡನೇ ಬಾರಿ ನವೀಕರಿಸಿತ್ತು.
ಮಾರ್ಚ್ 16ರ ಒಳಗೆ ತಮ್ಮ ಕಾರ್ಯಾಚರಣೆ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಗಣಿಗಾರಿಕೆ ಕಂಪೆನಿಗಳಿಗೆ ನಿರ್ದೇಶಿಸಿದೆ ಹಾಗೂ ಗುತ್ತಿಗೆ ನೀಡಲು ಹರಾಜು ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಿದೆ.







