ಮೂರನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 34ನೇ ಶತಕ; ಭಾರತ 303/6

ಕೇಪ್‌ಟೌನ್, ಫೆ.7: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ದಕ್ಷಿಣ ಆಫ್ರಿಕ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ದಾಖಲಿಸಿದ ಭರ್ಜರಿ ಶತಕದ ನೆರವಿನಲ್ಲಿ ಭಾರತ ದಕ್ಷಿಣ ಆಫ್ರಿಕ ತಂಡದ ಗೆಲುವಿಗೆ ಕಠಿಣ ಸವಾಲು ವಿಧಿಸಿದೆ
ಕೊಹ್ಲಿ ಅವರು ದಾಖಲಿಸಿದ 160 ರನ್‌ಗಳ (159ಎ, 12ಬೌ,2ಸಿ) ನೆರವಿನಲ್ಲಿ ಭಾರತ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 303 ರನ್ ಗಳಿಸಿದೆ.
ಕೊಹ್ಲಿ 119 ಎಸೆತಗಳಲ್ಲಿ 7 ಬೌಂಡರಿಗಳ ಸಹಾಯದಿಂದ 34ನೇ ಶತಕ ಪೂರ್ಣಗೊಳಿಸಿ ದಕ್ಷಿಣ ಆಫ್ರಿಕದ ಬೌಲರ್‌ಗಳ ದಾಳಿಯನ್ನು ಪುಡಿ ಪುಡಿ ಮಾಡಿದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಖಾತೆ ತೆರೆಯುವ ಮೊದಲೇ ಆರಂಭಿಕ ದಾಂಡಿಗ ರೋಹಿತ್ ಶರ್ಮಾ(0) ವಿಕೆಟ್ ಕಳೆದುಕೊಂಡಿತ್ತು. ಬಳಿಕ ನಾಯಕ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ತಂಡವನ್ನು ಆಧರಿಸಿ ಎರಡನೇ ವಿಕೆಟ್‌ಗೆ ಜೊತೆಯಾಗಿ 140 ರನ್‌ಗಳ ಕೊಡುಗೆ ನೀಡಿದರು.
ಕೊಹ್ಲಿಗೆ ಉತ್ತಮ ಬೆಂಬಲ ನೀಡಿದ ಶಿಖರ್ ಧವನ್ 76 ರನ್ (63ಎ, 12ಬೌ) , ಅಜಿಂಕ್ಯ ರಹಾನೆ 11 ರನ್ , ಹಾರ್ದಿಕ್ ಪಾಂಡ್ಯ 14ರನ್, ಮಹೇಂದ್ರ ಸಿಂಗ್ ಧೋನಿ 10ರನ್, ಕೇದಾರ್ ಜಾಧವ್ 1ರನ್ ಗಳಿಸಿ ಔಟಾದರು. ಅಂತಿಮವಾಗಿ ಕೊಹ್ಲಿ ಮತ್ತು ಭುವನೇಶ್ವರ ಕುಮಾರ್ 7ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 67 ರನ್ ಸೇರಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಭುವನೇಶ್ವರ ಕುಮಾರ್ ಔಟಾಗದೆ 16 ರನ್ ಗಳಿಸಿದರು.
ದಕ್ಷಿಣ ಆಫ್ರಿಕದ ಪರ ಜೆ.ಪಿ.ಡುಮಿನಿ 2 ವಿಕೆಟ್, ಕೆ.ರಬಡಾ, ಕ್ರಿಸ್ ಮೊರಿಸ್, ಫೆಹ್ಲುಕ್ವಾಯೊ ಮತ್ತು ಇಮ್ರಾನ್ ತಾಹಿರ್ 1 ವಿಕೆಟ್ ಪಡೆದರು.







