ಶ್ರೀಕೃಷ್ಣಮಠವನ್ನು ಸ್ವಾಧೀನಪಡಿಸಿಕೊಂಡರೆ ಮಠದಿಂದಲೇ ಹೊರಗೆ: ಪೇಜಾವರ ಶ್ರೀ

ಉಡುಪಿ, ಫೆ.7: ರಾಜ್ಯದ ಮಠಗಳು ಹಾಗೂ ದೇವಸ್ಥಾನಗಳನ್ನು ಸ್ವಾಧೀನ ಪಡಿಸಿಕೊಳ್ಳಲು ರಾಜ್ಯ ಸರಕಾರ ಪ್ರಯತ್ನಿಸುತ್ತಿದೆ ಎಂಬ ವರದಿಗಳಿಂದ ಕೆಂಡಾಮಂಡಲಗೊಂಡಿರುವ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಹಾಗೂ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಸರಕಾರದ ನಡೆಯನ್ನು ಟೀಕಿಸಿದ್ದಾರೆ.
ಇದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿಗೆ ಸ್ಪಷ್ಟ ನಿದರ್ಶನವಾಗಿದ್ದು, ಶ್ರೀಕೃಷ್ಣ ಮಠವನ್ನು ಸ್ವಾಧೀನಪಡಿಸಿಕೊಂಡರೆ ನಾನು ಮಠವನ್ನೇ ಬಿಟ್ಟು ಹೊರಬರುತ್ತೇನೆ. ಸರಕಾರದ ನೌಕರನಾಗಿ, ಸೇವಕನಾಗಿ ನಾನು ಶ್ರೀಮಠದಲ್ಲಿ ಇರಲಾರೆ ಎಂದು ರಥಬೀದಿಯಲ್ಲಿರುವ ಪೇಜಾವರ ಮಠದಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ವಿಶ್ವೇಶತೀರ್ಥರು ಹೇಳಿದರು.
ಸರಕಾರ ಇಂಥ ಒಂದು ನಡೆಯ ಮೂಲಕ ವಿಪಕ್ಷಗಳ ಕೈಗೆ ಹೋರಾಟಕ್ಕೆ ಬಹುದೊಡ್ಡ ಅಸ್ತ್ರವೊಂದನ್ನು ಕೊಟ್ಟಂತಾಗಿದೆ. ಆದರೆ ನಾನು ಇದರ ವಿರುದ್ಧ ಯಾವುದೇ ರೀತಿಯ ಹೋರಾಟಕ್ಕೆ ಇಳಿಯುವುದಿಲ್ಲ. ಬದಲಿಗೆ ಇದನ್ನು ಜನರ ತೀರ್ಮಾನಕ್ಕೆ ಬಿಡುತ್ತೇನೆ ಎಂದು ಎರಡು ವಾರಗಳ ಹಿಂದೆ ಕಾರು ಪ್ರಯಾಣದ ವೇಳೆ ಬೆನ್ನುನೋವಿಗೊಳಗಾಗಿ ಈಗ ಪೇಜಾವರ ಮಠದ ವಿಜಯಧ್ವಜ ಛತ್ರದಲ್ಲಿ ಆರು ವಾರಗಳ ವಿಶ್ರಾಂತಿಯಲ್ಲಿರುವ ಪೇಜಾವರ ಶ್ರೀ ಹೇಳಿದರು.
ಇದು ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿಗೆ ದ್ಯೋತಕ. ಜಾತ್ಯತೀತ ಸರಕಾರದ ಇಂಥ ಕ್ರಮ ಸರಿಯಲ್ಲ. ಅಲ್ಪಸಂಖ್ಯಾತರು ಹಾಗೂ ಬಹು ಸಂಖ್ಯಾತ ರನ್ನು ಸಮಾನವಾಗಿ ನೋಡಬೇಕು. ಆದರೆ ಈ ಸರಕಾರ ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ. ಇತ್ತೀಚೆಗಷ್ಟೆ ಅಲ್ಪಸಂಖ್ಯಾತರ ವಿರುದ್ಧದ ಪ್ರಕರಣಗಳನ್ನು ಮಾತ್ರ ಕೈಬಿಡಲು ಮುಂದಾದ ಕ್ರಮವೂ ಇದಕ್ಕೆ ಇನ್ನೊಂದು ಉದಾಹರಣೆ. ಸರಕಾರ ಮುಗ್ಧರಾದ ಎಲ್ಲರ ಪ್ರಕರಣಗಳನ್ನು ಕೈಬಿಡಲಿ. ಇದರಿಂದ ಸರಕಾರ ಹಿಂದೂ ವಿರೋಧಿ ಎಂಬುದು ಸ್ಪಷ್ಟವಾಗುತ್ತದೆ ಎಂದರು.
ಸರಕಾರ ರಾಜ್ಯದ ಮಠ ಹಾಗೂ ದೇವಸ್ಥಾನಗಳನ್ನು ಧಾರ್ಮಿಕ ದತ್ತಿ ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂಬ ಬಗ್ಗೆ ಹಲವು ಟಿವಿಗಳು ವರದಿ ಮಾಡುತ್ತಿವೆ. ಆದರೆ ಈ ವರದಿಗಳನ್ನು ನಾನು ಯಾವುದೇ ಮೂಲಗಳಿಂದ ಖಚಿತಪಡಿಸಿಕೊಂಡಿಲ್ಲ. ಸರಕಾರ ಈ ಕ್ರಮಕ್ಕೆ ಮುಂದಾದರೆ ಮಾತ್ರ ನಮ್ಮ ಆಕ್ಷೇಪ. ಇಲ್ಲದಿದ್ದರೆ ನಮ್ಮ ವಿರೋಧವಿಲ್ಲ ಎಂದು ಸ್ವಾಮೀಜಿ ಸ್ಪಷ್ಟ ಪಡಿಸಿದರು.
ಪಲಿಮಾರು ಶ್ರೀ ವಿರೋಧ: ಸರಕಾರದ ಪ್ರಸ್ತಾವಿತ ನಡೆಯನ್ನು ವಿರೋಧಿಸಿ ರುವ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರು, ಇದು ಸರಕಾರ ಬೆಂಕಿಗೆ ಕೈಹಾಕಿದಂತೆ ಎಂದು ಬಣ್ಣಿಸಿದರು. ಸರಕಾರಕ್ಕೆ ತನ್ನದೇ ಆದ ಅನೇಕ ಕಾರ್ಯಗಳಿವೆ. ಅದನ್ನು ಬಿಟ್ಟು ಧಾರ್ಮಿಕ ಸಂಸ್ಥೆಗಳಿಗೆ ಕೈಹಾಕ ಬಾರದು ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಧರ್ಮಸಂಸ್ಥೆಗಳು ಧರ್ಮಪ್ರಚಾರಕ್ಕೆ, ಭಕ್ತರಿಗೆ ಮಾರ್ಗದರ್ಶನಕ್ಕೆ ಮೀಸಲು ಹೊರತು ದುಡ್ಡು ಮಾಡುವುದಕ್ಕಲ್ಲ. ಸರಕಾರ ಮಠ, ಮಂದಿರ ವಿಷಯದಲ್ಲಿ ಹಸ್ತಕ್ಷೇಪ ಮಾಡಿದರೆ ಬೆಂಕಿಗೆ ಕೈಹಾಕಿದಂತೆ. ಅದನ್ನು ಆಯಾ ಧರ್ಮಾಧಿಕಾರಿಗಳೇ ನೋಡಿಕೊಳ್ಳುತ್ತಾರೆ. ಸಾರ್ವಜನಿಕರು ಇದನ್ನು ಪ್ರಬಲವಾಗಿ ವಿರೋಧಿಸುತ್ತಾರೆ ಎಂದರು.
ಈ ಬಗ್ಗೆ ಜನಾಭಿಪ್ರಾಯ ಮೂಡಿಸಲಾಗುವುದು. ಈ ಹಿಂದೊಮ್ಮೆ ಕೃಷ್ಣ ಮಠದ ವಿಷಯದಲ್ಲಿ ಕೈಹಾಕಿ ಸುಟ್ಟುಕೊಂಡಿದ್ದಾರೆ. ಕೋರ್ಟ್ ಕೂಡಾ ಮಠದ ಪರವಾಗಿ ತೀರ್ಪು ನೀಡಿದೆ ಎಂಬುದನ್ನು ಮರೆಯಬಾರದು ಎಂದು ಪಲಿಮಾರು ಶ್ರೀ ಹೇಳಿಕೆಯಲ್ಲಿ ತಿಳಿಸಿದ್ದಾರೆ.







