ಕೃಷ್ಣಾ ಮೇಲ್ದಂಡೆಗೆ 10 ಸಾವಿರ ಕೋಟಿ ಮೀಸಲಿಡುತ್ತೇವೆಂದು ಹೇಳಿಲ್ಲ: ಎಂ.ಬಿ. ಪಾಟೀಲ್

ಬೆಂಗಳೂರು, ಫೆ.7: ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಬಿಡುಗಡೆಯಾದ ಮತ್ತು ವೆಚ್ಚದ ಹಣದ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಕೆಲಕಾಲ ವಾದ ನಡೆಯಿತು.
ರಾಜ್ಯದ ನೀರಾವರಿ ಯೋಜನೆಗಳಿಗೆ ಪ್ರತಿವರ್ಷ 10 ಸಾವಿರ ಕೋಟಿ ರೂ. ನಂತೆ ಈವರೆಗೆ ಒಟ್ಟು 43 ಸಾವಿರ ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದು, ಚರ್ಚೆಗೆ ನಾಂದಿ ಹಾಡಿತು.
ಸಚಿವರ ಉತ್ತರ ಸರಿಯಿಲ್ಲ, ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡುವುದಾಗಿ ಸರಕಾರ ಹೇಳಿತ್ತು. ಆದರೆ ಸಚಿವರು ತಮ್ಮ ಮಾತನ್ನು ಬದಲಿಸಿ ಎಲ್ಲಾ ನೀರಾವರಿ ಯೋಜನೆಗಳಿಗೆ ಎಂದು ಹೇಳುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಹಾಗೂ ಪ್ರಶ್ನೆ ಕೇಳಿದ್ದ ಬಿ.ಜೆ. ಪುಟ್ಟಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.
ಪ್ರತಿಪಕ್ಷಗಳ ಸದಸ್ಯರ ವಾದವನ್ನು ತಳ್ಳಿ ಹಾಕಿದ ಸಚಿವ ಎಂ.ಬಿ.ಪಾಟೀಲ್ ಅವರು ಎಲ್ಲ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ. ನೀಡಲಾಗುವುದು ಎಂದಷ್ಟೇ ಹೇಳಿದ್ದೇವೆ. ಸಂಬಂಧಪಟ್ಟ ದಾಖಲೆ ನನ್ನ ಬಳಿ ಇದೆ ಎಂದು ದಾಖಲೆಯನ್ನು ಪ್ರದರ್ಶಿಸಿದರು. ಇದನ್ನು ಒಪ್ಪದ ಬಿ.ಜೆ. ಪುಟ್ಟಸ್ವಾಮಿ, ಕೂಡಲ ಸಂಗಮದಲ್ಲಿ ಬಸವಣ್ಣನವರ ಮುಂದೆ ಪ್ರಮಾಣ ಮಾಡುತ್ತೀರಾ ಎಂದು ಸವಾಲು ಹಾಕಿದರು.
ಬಸನಗೌಡ ಪಾಟೀಲ್ ಯತ್ನಾಳ್, ಕೃಷ್ಣೆ ಮೇಲೆ ಆಣೆ ಮಾಡಿ ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿದ್ದು, ನೆನಪಿಲ್ಲವೇ ಎಂದು ಕೇಳಿದರು.
ಸಚಿವ ಎಂ.ಬಿ. ಪಾಟೀಲ್, ರಾಜ್ಯದಲ್ಲಿನ ಕಾವೇರಿ ಕೊಳ್ಳ, ಕೃಷ್ಣಾ ಮೇಲ್ದಂಡೆ ಯೋಜನೆ, ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳು ಸೇರಿದಂತೆ, ರಾಜ್ಯದಲ್ಲಿ ಕೈಗೆತ್ತಿಕೊಂಡ ನೀರಾವರಿ ಯೋಜನೆಗಳಿಗೆ ಬಿಡುಗಡೆಯಾದ ಹಣದ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸಿದರು. ಆದರೆ ಇದನ್ನು ಪ್ರತಿಪಕ್ಷಗಳ ಸದಸ್ಯರು ಒಪ್ಪಲಿಲ್ಲ. ಇದರಿಂದಾಗಿ ಸಚಿವ ಎಂ.ಬಿ. ಪಾಟೀಲ್ ಮತ್ತು ಬಿಜೆಪಿ ಸದಸ್ಯರ ನಡುವೆ ಕೆಲಕಾಲ ವಾದ ವಿವಾದವೂ ನಡೆಯಿತು. ಕೊನೆಗೆ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಅರ್ಧ ಗಂಟೆಗಳ ಕಾಲ ಚರ್ಚೆಗೆ ಅವಕಾಶ ನೀಡುವುದಾಗಿ ವಿಷಯಕ್ಕೆ ತೆರೆ ಎಳೆದರು.







