ರಾಜ್ಯದಲ್ಲಿರುವ ಆಸ್ತಿ ಹರಾಜು ಹಾಕಲು ಕ್ರಮ: ರಾಮಲಿಂಗಾರೆಡ್ಡಿ
ಅಗ್ರಿಗೋಲ್ಡ್ ಸಮೂಹ ಸಂಸ್ಥೆಗಳ ವಂಚನೆ

ಬೆಂಗಳೂರು, ಫೆ.7: ಅಗ್ರಿ ಗೋಲ್ಡ್ ಸಂಸ್ಥೆಯ ವಿರುದ್ಧ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 9 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಸಿಐಡಿ ತನಿಖೆಯಲ್ಲಿ 23 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಅಲ್ಲದೆ, ಕಂಪೆನಿಯ ಮುಖ್ಯ ಐದು ಜನ ಆರೋಪಿಗಳು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಬುಧವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಎನ್.ಎ.ಹಾರೀಸ್ ನಿಯಮ 73ರಡಿಯಲ್ಲಿ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಅವರು, ರಾಜ್ಯದಲ್ಲಿ ಅಗ್ರಿಗೋಲ್ಡ್ ಕಂಪೆನಿಯಲ್ಲಿ 8,41,616 ಮಂದಿ, 1639 ಕೋಟಿ ರೂ.ಗಳನ್ನು ತೊಡಗಿಸಿದ್ದಾರೆ ಎಂದರು.
ರಾಜ್ಯದಲ್ಲಿ ಆರೋಪಿತ ಅಗ್ರಿಗೋಲ್ಡ್ ಕಂಪೆನಿ ಖರೀದಿ ಮಾಡಿದ್ದ ಸುಮಾರು 530 ಎಕರೆ ಜಮೀನನ್ನು ಹಾಗೂ 12 ಕಾರುಗಳನ್ನು ಹಾಗೂ ಆರೋಪಿತ ಕಂಪೆನಿಗೆ ಸೇರಿದ ಬ್ಯಾಂಕ್ ಅಕೌಂಟ್‌ಗಳಲ್ಲಿ 75.88 ಲಕ್ಷ ರೂ.ಪತ್ತೆ ಮಾಡಿ, ಈ ಜಮೀನು ಮತ್ತು ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡು, ಬಂದ ಹಣವನ್ನು ಠೇವಣಿದಾರರಿಗೆ ಹಿಂತಿರುಗಿಸಲು ರಾಮನಗರ ಜಿಲ್ಲೆಯ ಸಹಾಯಕ ಆಯುಕ್ತರನ್ನು ಸಕ್ಷಮ ಪ್ರಾಧಿಕಾರಿಯನ್ನು ಅಧಿಸೂಚಿಸಲಾಗಿದೆ ಎಂದು ಅವರು ಹೇಳಿದರು.
ಸಹಾಯಕ ಆಯುಕ್ತರು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದು, ಅನುಮತಿ ಪಡೆದುಕೊಂಡು ಹರಾಜು ಪ್ರಕ್ರಿಯೆ ಪ್ರಾರಂಭಿಸುತ್ತಾರೆ. ಉಡುಪಿ ಜಿಲ್ಲೆಯ ಪ್ರಧಾನ ಸತ್ರ ನ್ಯಾಯಾಲಯದಲ್ಲಿ ಪ್ರಕರಣವು ವಿಚಾರಣಾ ಹಂತದಲ್ಲಿದ್ದು, ಸರಕಾರದ ಪರವಾಗಿ ವಾದ ಮಂಡಿಸಲು ಸರಕಾರಿ ವಕೀಲ ವೈ.ಶಶಿಧರ್‌ರನ್ನು ನೇಮಕ ಮಾಡಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಅಗ್ರಿಗೋಲ್ಡ್ ಕಂಪೆನಿಗೆ ಸಂಬಂಧಿಸಿ ಸ್ಥಿರ ಮತ್ತು ಚರ ಆಸ್ತಿಗಳು ಬಹುಪಾಲು ಅಂದರೆ ಸುಮಾರು 16 ಸಾವಿರ ಎಕರೆ ಜಮೀನು ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಇದ್ದು, ಇದಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ಪಿಐಎಲ್ ವಿಚಾರಣೆಯಲ್ಲಿದೆ. ನಮ್ಮ ರಾಜ್ಯದ ಠೇವಣಿದಾರರ ಹಿತ ರಕ್ಷಣೆ ಕಾಪಾಡಲು ಒಬ್ಬ ಸರಕಾರಿ ವಕೀಲರನ್ನು ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ಪ್ರತಿನಿಧಿಸಲು, ಅಲ್ಲಿನ ಅಡ್ವೋಕೆಟ್ ಜನರಲ್‌ಗೆ ನಮ್ಮ ಸರಕಾರ ಪತ್ರ ವ್ಯವಹಾರ ಮಾಡಿ, ಒಬ್ಬ ಸರಕಾರಿ ವಕೀಲರನ್ನು ನೇಮಕ ಮಾಡಲಾಗಿದೆ ಎಂದು ಅವರು ಹೇಳಿದರು.







