ಮಾಲ್ದೀವ್ಸ್‌ನಲ್ಲಿ ಹೊರಗಿನ ಹಸ್ತಕ್ಷೇಪ ಪರಿಸ್ಥಿತಿಯನ್ನು ಬಿಗಡಾಯಿಸಬಹುದು: ಭಾರತಕ್ಕೆ ಚೀನಾ ಎಚ್ಚರಿಕೆ

ಬೀಜಿಂಗ್, ಫೆ.7: ದ್ವೀಪಸಮೂಹಗಳ ರಾಷ್ಟ್ರ ಮಾಲ್ದೀವ್ಸ್‌ನಲ್ಲಿ ತಲೆದೋರಿರುವ ಸ್ಥಿತಿಯನ್ನು ಪರಿಹರಿಸಲು ಭಾರತವು ಮಧ್ಯಪ್ರವೇಶಿಸಬೇಕು ಎಂದು ಮಾಲ್ದೀವ್ಸ್‌ನ ಮಾಜಿ ಅಧ್ಯಕ್ಷರಾದ ಮುಹಮ್ಮದ್ ನಶೀದ್ ಮನವಿ ಮಾಡಿರುವ ಬೆನ್ನಿಗೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾ, ದ್ವೀಪರಾಷ್ಟ್ರದಲ್ಲಿ ಹೊರಗಿನವರು ಹಸ್ತಕ್ಷೇಪ ಮಾಡುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು ಎಂದು ಎಚ್ಚರಿಕೆ ನೀಡಿದೆ.
ಮಾಲ್ದೀವ್ಸ್‌ನ ಅಧ್ಯಕ್ಷರಾದ ಅಬ್ದುಲ್ಲಾ ಯಮೀನ್ ಅವರಿಗೆ ತನ್ನ ಬೆಂಬಲವಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಚೀನಾ ತಾನು ಇತರ ರಾಷ್ಟ್ರಗಳ ಆಂತರಿಕ ವ್ಯವಹಾರದಲ್ಲಿ ಮೂಗು ತೂರಿಸುವುದಿಲ್ಲ ಎಂದು ತಿಳಿಸಿದೆ.
ಮಾಲ್ದೀವ್ಸ್‌ನಲ್ಲಿ ಸದ್ಯ ತಲೆದೋರಿರುವ ಬಿಕ್ಕಟ್ಟು ಅದರ ಆಂತರಿಕ ವಿಷಯವಾಗಿದೆ. ಅದನ್ನು ಸಂಬಂಧಪಟ್ಟ ಪಕ್ಷಗಳು ಪರಸ್ಪರ ಸಮಾಲೋಚನೆಗಳನ್ನು ನಡೆಸಿ ಬರೆಹರಿಸಿಕೊಳ್ಳಬೇಕು ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರಾದ ಗೆಂಗ್ ಶುವಾಂಗ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಸಮುದಾಯವು ಮಾಲ್ದೀವ್ಸ್‌ನ ಸಾರ್ವಭೌಮತೆಯನ್ನು ಗೌರವಿಸುವ ತತ್ವದ ಆಧಾರದಲ್ಲಿ ರಚನಾತ್ಮಕ ಪಾತ್ರವನ್ನು ನಿಭಾಯಿಸಬೇಕು. ದ್ವೀಪರಾಷ್ಟ್ರದ ಆಂತರಿಕ ವಿಷಯದಲ್ಲಿ ಕೈಯಾಡಿಸುವ ಮೂಲಕ ಸದ್ಯದ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಬಾರದು ಎಂದು ಅವರು ತಿಳಿಸಿದ್ದಾರೆ.
2012ರಲ್ಲಿ ಸೇನಾ ಕಾರ್ಯಾಚರಣೆಯ ನಡೆಸುವ ಮೂಲಕ ಉಚ್ಛಾಟನೆಗೊಂಡಿದ್ದ ಮಾಲ್ದೀವ್ಸ್‌ನ ಮಾಜಿ ಅಧ್ಯಕ್ಷರಾದ ಮುಹಮ್ಮದ್ ನಶೀದ್ ಅವರು, ರಾಷ್ಟ್ರದ ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಭಾರತವು ತನ್ನ ಸೇನೆಯೊಂದಿಗೆ ಮಧ್ಯಪ್ರವೇಶ ಮಾಡಬೇಕು ಎಂದು ಮಂಗಳವಾರದಂದು ಮನವಿ ಮಾಡಿದ್ದರು.
ದೇಶದ ಮುಖ್ಯ ನ್ಯಾಯಾಧೀಶರನ್ನು ಮತ್ತು ಮಾಜಿ ಅಧ್ಯಕ್ಷರಾದ ಅಬ್ದುಲ್ ಗಯೂಮ್ ಅವರನ್ನು ಬಂಧಿಸಿರುವ ಹಾಲಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರು ದೇಶದಲ್ಲಿ ತುರ್ತುಸ್ಥಿತಿ ಘೋಷಿಸಿರುವ ಬಗ್ಗೆ ಆಘಾತವಾಗಿದೆ ಎಂದು ಭಾರತವು ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.
ಕಳೆದ ವಾರ ಮಾಲ್ದೀವ್ಸ್‌ನ ಸರ್ವೋಚ್ಚ ನ್ಯಾಯಾಲಯವು ಒಂಬತ್ತು ಸಂಸದರ ಬಿಡುಗಡೆಗೆ ಆದೇಶ ನೀಡಿತ್ತು. ಈ ಆದೇಶವು ನಶೀದ್ ನೇತೃತ್ವದ ಮಾಲ್ದೀವಿಯನ್ ಡೆಮಾಕ್ರಾಟಿಕ್ ಪಕ್ಷವು ಬಹುಮತವನ್ನು ಉಳಿಸಿಕೊಂಡು ಯಮೀನ್ ಅವರ ಅಧ್ಯಕ್ಷತೆಗೆ ಅಪಾಯ ತಂದೊಡ್ಡಿತ್ತು.
ಮಾಲ್ದೀವ್ಸ್ ಸರಕಾರ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ಅಂತಾರಾಷ್ಟ್ರೀಯ ಸಮುದಾಯ ಮನವಿ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಗೆಂಗ್,ಮಾಲ್ದೀವ್ಸ್ ಸರಕಾರ, ರಾಜಕೀಯ ಪಕ್ಷಗಳು ಮತ್ತು ಜನರು ಈ ಪರಿಸ್ಥಿತಿಯನ್ನು ಸ್ವತಂತ್ರವಾಗಿ ನಿಭಾಯಿಸುವಷ್ಟು ಬುದ್ಧಿವಂತಿಕೆಯನ್ನು ಹೊಂದಿದ್ದಾರೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.
ಚೀನಾವು ಈಗಾಗಲೇ ಮಾಲ್ದೀವ್ಸ್‌ನಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಸಾಕಷ್ಟು ಬಂಡವಾಳವನ್ನು ಹೂಡಿದೆ. 2017ರಲ್ಲಿ ಮಾಲ್ದೀವ್ಸ್ ಪಾಕಿಸ್ತಾನ ನಂತರ ಚೀನಾದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಮಾಡಿದ ಎರಡನೇ ದೇಶವಾಯಿತು.
ಭಾರತವು ಆಕ್ರಮಣಕಾರನಲ್ಲ, ವಿಮೋಚಕವಾಗಿದೆ: ನಶೀದ್
ಮಾಲ್ದೀವ್ಸ್‌ನ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಚೀನಾವು ಭಾರತಕ್ಕೆ ಪರೋಕ್ಷವಾಗಿ ನೀಡಿರುವ ಎಚ್ಚರಿಕೆಗೆ ಎದಿರೇಟು ನೀಡಿರುವ ಮಾಲ್ದೀವ್ಸ್‌ನ ಮಾಜಿ ಅಧ್ಯಕ್ಷರಾದ ಮುಹಮ್ಮದ್ ನಶೀದ್, ದ್ವೀಪರಾಷ್ಟ್ರದ ಜನರು ಭಾರತದ ಪಾತ್ರವನ್ನು ಗುಣಾತ್ಮಕವಾಗಿ ನೋಡುತ್ತಾರೆ. 1988ರಲ್ಲಿ ತಲೆದೋರಿದ್ದ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು ವಿಮೋಚಕನ ಪಾತ್ರವನ್ನು ನಿಭಾಯಿಸಿತ್ತೇ ಹೊರತು ಆಕ್ರಮಣಕಾರನ ಪಾತ್ರವನ್ನಲ್ಲ ಎಂದು ಹೇಳಿದ್ದಾರೆ.
ಪರಿಸ್ಥಿತಿಯನ್ನು ಆಂತರಿಕವಾಗಿ ಬಗೆಹರಿಸಿಕೊಳ್ಳಿ ಎಂದು ಹೇಳುವುದು ನಾವು ದಂಗೆಯನ್ನು ನಡೆಸಬೇಕು ಎಂದು ಹೇಳುವುದಕ್ಕೆ ಸಮ. ಅದರಿಂದ ಅಶಾಂತಿ ತಲೆದೋರುತ್ತದೆ. ಮಾಲ್ದೀವ್ಸ್‌ನ ಜನರು ಭಾರತ ಪಾತ್ರವನ್ನು ಗುಣಾತ್ಮಕವಾಗಿ ನೋಡುತ್ತಾರೆ. 1988ರಲ್ಲಿ ಅವರು ಭಾರತ ಬಂದು ನಮ್ಮ ಬಿಕ್ಕಟ್ಟನ್ನು ಪರಿಹರಿಸಿ ತೆರಳಿದರು. ಅವರು ಆಕ್ರಮಣಕಾರರಲ್ಲ ಬದಲಾಗಿ ವಿಮೋಚಕರು. ಹಾಗಾಗಿ ಮಾಲ್ದೀವ್ಸ್ ಭಾರತದತ್ತ ನೋಡುತ್ತಿದೆ ಎಂದು ನಶೀದ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.
ದ್ವೀಪರಾಷ್ಟ್ರದ ಬಿಕ್ಕಟ್ಟನ್ನು ಪರಿಹರಿಸಲು ಭಾರತವು ಮಧ್ಯಪ್ರವೇಶ ಮಾಡಬೇಕೆಂದು ಬುಧವಾರದಂದು ಮತ್ತೊಮ್ಮೆ ಮನವಿ ಮಾಡಿದ ನಶೀದ್, ಬಂಧನಕ್ಕೀಡಾಗಿರುವ ಅಧ್ಯಕ್ಷ ಗಯೂಮ್ ಮತ್ತು ನ್ಯಾಯಾಧೀಶರನ್ನು ಬಿಡಿಸಬೇಕು. ಗಯೂಮ್ ಆಹಾರ ಸೇವಿಸುತ್ತಿಲ್ಲ ಮತ್ತು ನ್ಯಾಯಾಧೀಶರಾದ ಅಲಿ ಹಮೀದ್ ಅವರನ್ನು ಕೆಟ್ಟದಾಗಿ ನೋಡಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ನನಗೆ ಲಭಿಸಿದೆ ಎಂದು ನಶೀದ್ ಟ್ವೀಟ್ ಮಾಡಿದ್ದಾರೆ.







