ತಹಶೀಲ್ದಾರ್‌ಗಳಿಗೆ ವಾರಕ್ಕೊಂದು ಸಭೆ ಕರೆಯಲು ಹೇಳಿದ್ದೇನೆ: ಕಾಗೋಡು ತಿಮ್ಮಪ್ಪ
ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳ ಇತ್ಯರ್ಥ ವಿಚಾರ

ಬೆಂಗಳೂರು, ಫೆ.7: ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳನ್ನು ಇತ್ಯರ್ಥಪಡಿಸಲು ವಾರಕ್ಕೊಂದು ಸಭೆ ಕರೆಯಿರಿ ಎಂದು ಹೇಳುತ್ತಿದ್ದೇನೆ. ಆದರೆ, ಆಯಾಯ ಕ್ಷೇತ್ರದ ಶಾಸಕರು ಸಭೆ ಕರೆಯುತ್ತಿಲ್ಲ ಎಂದು ಕಂದಾಯ ಸಚಿ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಬುಧವಾರ ವಿಧಾನ ಪರಿಷತ್‌ನಲ್ಲಿ ಎನ್.ಅಪ್ಪಾಜಿಗೌಡ ಅವರ ಪರವಾಗಿ ಜೆಡಿಎಸ್ ಸದಸ್ಯ ರಮೇಶ್‌ಬಾಬು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳನ್ನು ಇತ್ಯರ್ಥಪಡಿಸಲು ತಹಶೀಲ್ದಾರ್ ಮಟ್ಟದಲ್ಲೇ ಸಭೆ ಕರೆಯಬಹುದು. ಆದರೆ ಶಾಸಕರುಗಳು ಮಾತ್ರ ತಹಶೀಲ್ದಾರ್‌ಗಳಿಗೆ ಸಭೆ ಕರೆಯಬೇಡಿ ಎಂದು ಹೇಳುತ್ತಿದ್ದು, ನಾನು ಈಗ ಸಂದಿಗ್ಥ ಸ್ಥಿತಿಯಲ್ಲಿ ಇದ್ದೇನೆ ಎಂದು ಹೇಳಿದರು.
ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ , ಬಗರ್ ಹುಕುಂ ಸಮಿತಿಯಲ್ಲಿ ನಮ್ಮನ್ನು (ವಿಧಾನ ಪರಿಷತ್ ಸದಸ್ಯರನ್ನು) ಸೇರಿಸಿಬಿಡಿ. ನಿಮಗೆ ನಾಚಿಕೆಯಾಗದಂತೆ ಅರ್ಜಿಗಳನ್ನು ವಿತರಿಸುತ್ತೇವೆ ಎಂದು ಸಚಿವರನ್ನು ಆಗ್ರಹಪಡಿಸಿದರು.
ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳನ್ನು ಇತ್ಯರ್ಥಪಡಿಸಲು ಶಾಸಕರು ಯಾರೂ ಸಭೆ ನಡೆಸಿಲ್ಲ. ನಿಮ್ಮನ್ನು ಆ ದೇವರೇ ಕಾಪಾಡಬೇಕು. ಈಗಲೂ ಹೇಳುತ್ತಿದ್ದೇನೆ. ನಮ್ಮನ್ನು ಸಮಿತಿಯ ಸದಸ್ಯರನ್ನಾಗಿ ಮಾಡಿ ಎಂದು ಆಗ್ರಹಪಡಿಸಿದರು.
ಸಚಿವ ಕಾಗೋಡು ತಿಮ್ಮಪ್ಪ ಅವರು ಸಮಿತಿಗೆ ಶಾಸಕರುಗಳನ್ನು ಕೇತ್ರವಾರು ಮಟ್ಟದಲ್ಲಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ವಿಧಾನ ಪರಿಷತ್ ಸದಸ್ಯರನ್ನು ಮಾಡಬೇಕಾದರೆ ಈಗಿರುವ ಕಾನೂನಿಗೆ ತಿದ್ದುಪಡಿ ತರಬೇಕಾಗುತ್ತದೆ. ಅಲ್ಲದೆ, ಹೆಚ್ಚುವರಿ ಸಮಿತಿ ಮಾಡಲು ಆಗುವುದಿಲ್ಲ. ವಿಧಾನ ಪರಿಷತ್ ಸದಸ್ಯರನ್ನು ಸಮಿತಿಗೆ ಸೇರಿಸಲು ನನ್ನ ಅಭ್ಯಂತರವೇನೂ ಇಲ್ಲ ಎಂದು ಹೇಳಿದರು.







