ತುಮಕೂರು: ಐವರು ವಾಹನ ಕಳ್ಳರ ಬಂಧನ
ತುಮಕೂರು,ಫೆ.07: ಗೂಡ್ಸ್ ವಾಹನಗಳನ್ನು ಕಳವು ಮಾಡಿ ನೊಂದಣಿ ನಂಬರ್ ಟ್ಯಾಂಪರಿಂಗ್ ಮಾಡಿ, ನಕಲಿ ದಾಖಲಾತಿ ಸೃಷ್ಠಿಸಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ ಸುಮಾರು 25 ಲಕ್ಷ ರೂ.ಬೆಲೆ ಬಾಳುವ ನಾಲ್ಕು ಮಿನಿ ಗೂಡ್ಸ್ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ತುಮಕೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ 2017 ಅಕ್ಟೋಬರ್ 29ರಂದು ಕುಣಿಗಲ್ ತಾಲೂಕು ಹುಲಿಯೂರುದುರ್ಗ ವಾಜರಪಾಳ್ಯ ರಸ್ತೆಯಲ್ಲಿ ನಿಲ್ಲಿಸಿದ್ದ ಕೆ.ಎ-06-ಡಿ-9815 ನೇ ಮಿನಿ ಗೂಡ್ಸ್ ವಾಹನ ಕಳವಾಗಿತ್ತು. ಈ ಸಂಬಂಧ ವಾಹನ ಮಾಲೀಕ ರವಿಚಂದ್ರ ಎಂಬವರು ಹುಲಿಯೂರು ದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಾದ ತಮಿಳುನಾಡು ಮೂಲದ ಚಂದ್ರನ್ (64), ಗೋಪಾಲ್ (39), ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆ ತಾಲೂಕು ಅಲಂಗಾರ್ ಗ್ರಾಮದ ಭಾಸ್ಕರ್ ಸಾಲಿನ್ಸ್ (39), ಹಬೀಬ್ ರೆಹಮಾನ್ (55) ರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಹುಲಿಯೂರುದುರ್ಗ, ಕಿಬ್ಬನಹಳ್ಳಿ, ರಾಮನಗರ ಗ್ರಾಮಾಂತರ ಮತ್ತು ಕುಶಾಲನಗರ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಒಟ್ಟು 25 ಲಕ್ಷ ರೂಪಾಯಿ ಬೆಲೆ ಬಾಳುವ 4 ಆಶೋಕ್ ಲೈಲ್ಯಾಂಡ್ ದೋಸ್ತ್ ಮಿನಿಗೂಡ್ಸ್ ವಾಹನಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ನಾಲ್ಕು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದ ಮತ್ತೊಬ್ಬ ಆರೋಪಿ ಎಸ್.ಮಣಿಯನ್ನು ಪತ್ತೆ ಮಾಡಿ ಬಂಧಿಸಿದ್ದು, ಆರೋಪಿಗಳ ತನಿಖೆ ವೇಳೆ ಹೊನ್ನಾಳಿ, ಹರಿಹರ, ದಾವಣಗೆರೆ ಆರ್.ಎಂ.ಸಿ ಯಾರ್ಡ್,ಶಿವಮೊಗ್ಗದ ಜಯನಗರ, ಪೇಪರ್ ಟೌನ್ ಗ್ರಾಮಾಂತರ, ಕುಶಾಲನಗರ, ಕಾರ್ಕಳ, ಬೆಂಗಳೂರು ಮುಂತಾದ ಕಡೆಗಳಲ್ಲಿ ಆರೋಪಿಗಳ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ಜಾಮೀನು ಪಡೆದು ಜೈಲುಗಳಿಂದ ಹೊರಬಂದಿದ್ದಾರೆ. ಈ ಆರೋಪಿಗಳು ರಾತ್ರಿ ವೇಳೆ ವಾಹನಗಳನ್ನು ಕಳವು ಮಾಡಿ ನೋಂದಣಿ ನಂಬರನ್ನು ಟ್ಯಾಂಪರಿಂಗ್ ಮಾಡಿ ನಂಬರನ್ನು ಬದಲಾಯಿಸಿ, ನಕಲಿ ದಾಖಲಾತಿಗಳನ್ನು ಮಾಡಿಸಿ ಮಾರಾಟ ಮಾಡುವ ದಂಧೆಯನ್ನು ಮಾಡುತ್ತಿದ್ದರು ಎಂದು ಒಪ್ಪಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ.ವಿ.ಗೋಪಿನಾಥ್ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಡಿವೈಎಸ್ಪಿ ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಸಿಪಿಐಗಳಾದ ಬಾಳೆಗೌಡ, ಬಿ.ಪಿ. ಮಂಜು ಮತ್ತು ಸಿಬ್ಬಂದಿಗಳಾದ ಪುಟ್ಟರಾಮು, ಪರಮೇಶ್ವರಪ್ಪ, ಕೆ.ಆರ್.ರವಿ, ರವಿಕುಮಾರ, ವೆಂಕಟೇಶಮೂರ್ತಿ, ಮುನಿರತ್ನಂ, ರಂಗಸ್ವಾಮಿ, ಷಡಾಕ್ಷರಿ, ನರಸಿಂಹರಾಜು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಶ್ರಮಿಸಿದ್ದಾರೆ.