‘ವಿರುಪಾ’ ಕನ್ನಡ ಸಿನೆಮಾದ ‘ಟೀಸರ್’ಅನಾವರಣ

ಮಂಗಳೂರು, ಫೆ.7: ಉದ್ಯಮಿ ಡ್ಯಾಪ್ನಿ ನೀತು ಡಿಸೋಜ ನಿರ್ಮಾಣದ, ಛಾಯಾಗ್ರಾಹಕ ಪುನೀಕ್ ಶೆಟ್ಟಿ ನಿರ್ದೇಶನದ ‘ವಿರುಪಾ’ ಕನ್ನಡ ಚಿತ್ರದ ಟೀಸರ್ ಬುಧವಾರ ನಗರದ ಖಾಸಗಿ ಹೊಟೇಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಟೀಸರ್ ಬಿಡುಗಡೆಗೊಳಿಸಿ ಮಾತನಾಡಿದ ಪರಿಸರವಾದಿ ದಿನೇಶ್ ಹೊಳ್ಳ ಹಂಪಿಯಲ್ಲಿ ನಡೆಯುವ ಪ್ರತಿ ಕ್ಷಣವನ್ನು ಈ ಚಿತ್ರದಲ್ಲಿ ವಿಭಿನ್ನವಾಗಿ ಸೆರೆ ಹಿಡಿಯಲಾಗಿದೆ. ಮೂರು ಮಕ್ಕಳ ಕಥೆಯೊಳಗೆ ಬೆಸೆದ ಈ ಸಿನೆಮಾ ಅದ್ಬುತವಾಗಿ ಮೂಡಿಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರದ ನಿರ್ದೇಶಕ ಪುನೀಕ್ ಶೆಟ್ಟಿ ಮಾತನಾಡಿ, ಶೂಟಿಂಗ್ ಬಹುತೇಕ ಪೂರ್ಣಗೊಳಿಸಿ ಸಂಕಲನ ಹಂತದಲ್ಲಿದ್ದು, ಮಕ್ಕಳನ್ನೇ ಮುಖ್ಯ ಕಥೆಯಲ್ಲಿಟ್ಟು, ಮಕ್ಕಳ ಮೂಲಕವೇ ನಡೆಸಿದ ಅಪರೂಪದ ಚಿತ್ರವಿದು. ಪ್ರವಾಸೋದ್ಯಮದಲ್ಲಿ ಜಗತ್ತಿನಲ್ಲಿ ಗುರುತಿಸಿಕೊಂಡ ಹಂಪಿಯಲ್ಲಿ ‘ವಿರುಪಾ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ನಟನಾ ಕೌಶಲ್ಯತೆ ಅರಿಯದ ಮಕ್ಕಳಿಗೆ ಮೊದಲು ನಟನಾ ಚಾತುರ್ಯತೆಯನ್ನು ತಿಳಿಸಿಕೊಟ್ಟು ಆ ಬಳಿಕ, ಶೂಟಿಂಗ್ ನಡೆಸಲಾಗಿದೆ. ಕಿವಿ ಕೇಳದ ಹಾಗೂ ಕಣ್ಣು ಕಾಣದ ಮಕ್ಕಳ ಈ ಕಥೆಯನ್ನು ಅಂತಹ ಮಕ್ಕಳ ಮೂಲಕವೇ ನಿರ್ಮಿಸಲಾಗಿದೆ. ಈ ಚಿತ್ರದಲ್ಲಿ ಬರುವ ಪಾತ್ರಧಾರಿಗಳು ಸ್ಥಳೀಯರು ಹಾಗೂ ಕಥೆಯಲ್ಲಿ ಬರುವ ಸನ್ನಿವೇಶವನ್ನು ಸ್ವತಃ ಅನುಭವಿಸಿದವರೇ ಆಗಿದ್ದಾರೆ. ಉಳಿದಂತೆ ಹಂಪಿಯ ಅಲ್ಲಿನ ಗೈಡ್, ಅಜ್ಜಿಯ ಪಾತ್ರ, ಹೊಟೇಲ್‌ನಲ್ಲಿ ಇರುವ ವಿದೇಶಿಗ ಸೇರಿದಂತೆ ಯಾರೆಲ್ಲ ಅಲ್ಲಿ ಜೀವನ ನಿರ್ವಹಿಸುತ್ತಿದ್ದಾರೋ ಅವರನ್ನೇ ಮುಖ್ಯ ಭೂಮಿಕೆಯಲ್ಲಿಟ್ಟು ಸಿನೆಮಾ ಮಾಡಲಾಗಿದೆ ಎಂದರು.
ಹಂಪಿಯ ಸುಂದರ ಹಾಗೂ ಮನಮೋಹಕ ದೃಶ್ಯವನ್ನು ಈ ಸಿನೆಮಾದಲ್ಲಿ ಅದ್ಬುತವಾಗಿ ಕಟ್ಟಿಕೊಡಲಾಗಿದೆ. ವಿಶೇಷವಾಗಿ ಈ ಸಿನೆಮಾವನ್ನು ‘ಸಿಂಕ್ ಸೌಂಡ್’ ಮಾದರಿಯಲ್ಲಿ ಚಿತ್ರೀಕರಿಸಲಾಗಿದೆ. ಹೀಗಾಗಿ ಶೂಟಿಂಗ್ ಮಾಡುವ ಅಲ್ಲಿನ ಧ್ವನಿಯನ್ನೇ ಈ ಸಿನೆಮಾದಲ್ಲಿ ಹಿಡಿದಿಡಲಾಗಿದೆ. ಈಗಾಗಲೇ ಒಂದು ತಿಂಗಳ ಕಾಲ ಹಂಪಿ ಆಸುಪಾಸಿನಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಮುಂದಿನ ತಿಂಗಳೊಳಗೆ ಫ್ರಾನ್ಸ್ ಹಾಗೂ ಗೋವಾದಲ್ಲಿ ಕೊನೆಯ ಹಂತದ ಶೂಟಿಂಗ್ ನಡೆಸಲು ತೀರ್ಮಾನಿಸಲಾಗಿದೆ. ಶೀಘ್ರದಲ್ಲಿ ಈ ಸಿನೆಮಾ ಬಿಡುಗಡೆಯಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಡ್ಯಾಪ್ನಿ ನೀತು ಡಿಸೋಜ, ಕಾರ್ಯಕಾರಿ ನಿರ್ಮಾಪಕ ಡಿಕ್ಸನ್ ಜಾಕಿ ಡಿಸೋಜ, ಕಿರಣ್ ಶೆಣೈ, ಅವಿನಾಶ್ ಕಾವೂರು ಉಪಸ್ಥಿತರಿದ್ದರು.







