ದೇಗುಲಗಳ ನಿರ್ಮಾಣದಿಂದ ಮನಸ್ಸಿಗೆ ಶಾಂತಿ: ಚಲುವರಾಯಸ್ವಾಮಿ

ಮದ್ದೂರು, ಫೆ.7: ಗ್ರಾಮಗಳಲ್ಲಿ ದೇಗುಲಗಳ ನಿರ್ಮಾಣದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ದೇವಾಲಯದ ನಿರ್ಮಾಣದ ಜೊತೆಗೆ ಅದರ ನಿರ್ವಹಣೆ ಅಷ್ಟೇ ಮುಖ್ಯ ಎಂದು ಶಾಸಕ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಕಿರಂಗೂರು, ಕಳ್ಳಿಕೊಪ್ಪಲು ಗ್ರಾಮದ ಶ್ರೀ ತೋಪಿನ ತಿಮ್ಮಪ್ಪನ ದೇವಸ್ಥಾನ ಜೀರ್ಣೋದ್ಧಾರ ಪ್ರತಿಷ್ಠಾಪನಾ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮಕ್ಕೆ ಶಾಲೆ, ಅಂಗನವಾಡಿ, ದೇವಸ್ಥಾನ, ಆಸ್ಪತ್ರೆ, ಕುಡಿಯುವ ನೀರು ಸೇರಿದಂತೆ ಎಲ್ಲವು ಮುಖ್ಯ. ಇವುಗಳನ್ನು ಪಡೆಯಲು ಎಲ್ಲರೂ ಒಗ್ಗಟ್ಟು ಪ್ರದರ್ಶನ ಮಾಡಬೇಕು. ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಪ್ರಗತಿ ಅಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಆಶೀರ್ವಚನ ನೀಡಿದ ರಾಮನಗರ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ಇತ್ತೀಚಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವುದು ವಿಪರ್ಯಾಸದ ಸಂಗತಿ. ನಾವೇ ಶಾಶ್ವತ ಅಲ್ಲ ಎಂದ ಮೇಲೆ ಸ್ವಾರ್ಥ ಹಾಗೂ ಆಸೆಯ ಹಿಂದೆ ಹೋಗುವುದು ಸರಿಯಲ್ಲ. ದೇವಾಲಯಗಳ ನಿರ್ಮಾಣದಿಂದ ಗ್ರಾಮದಲ್ಲಿ ಶಾಂತಿ, ಸಹಬಾಳ್ವೆ, ಸಾಧ್ಯವಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.
ಕೊಮ್ಮೇರಹಳ್ಳಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ತಾಪಂ ಉಪಾಧ್ಯಕ್ಷ ಬಿ.ಎಂ.ರಘು, ಸಮಾಜ ಸೇವಕರಾದ ನಾಗರಾಜು, ಕಿಶೋರ್, ಬೆಟ್ಟೇಗೌಡ, ತೋಪಿನ ತಿಮ್ಮಪ್ಪ ಸೇವಾ ಸಮಿತಿಯ ಅಧ್ಯಕ್ಷ ಕೆ.ಟಿ.ಶಶಿಧರ, ಗೌರವಾಧ್ಯಕ್ಷ ಕೆ.ಕೆ.ಕೃಷ್ಣ, ಉಪಾಧ್ಯಕ್ಷ ಪುಟ್ಟಸ್ವಾಮಿ, ಕಾರ್ಯದರ್ಶಿ ಟಿ.ಜಯರಾಂ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಕೆ.ಜೋಗಿಗೌಡ, ತಾಪಂ ಸದಸ್ಯ ತೋಯಜಾಕ್ಷ, ಮನ್‍ಮುಲ್ ಮಾಜಿ ನಿರ್ದೇಶಕ ಕುಮಾರ್ ಕೊಪ್ಪ, ಮುಖಂಡ ದಿವಾಕರ್ ಇತರರು ಹಾಜರಿದ್ದರು.







