ಕೆಎಸ್ಸಾರ್ಟಿಸಿ ಬಸ್ ಗಳ ಮುಖಾಮುಖಿ ಢಿಕ್ಕಿ: ಇಬ್ಬರು ಚಾಲಕರು ಮೃತ್ಯು, 15 ಮಂದಿಗೆ ಗಾಯ

ಮಡಿಕೇರಿ, ಫೆ. 8: ಎರಡು ಕೆಎಸ್ಸಾರ್ಟಿಸಿ ಬಸ್ ಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಚಾಲಕರು ಮೃತಪಟ್ಟಿದ್ದು, ಸುಮಾರು 15 ಮಂದಿಗೂ ಅಧಿಕ ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪದಲ್ಲಿ ನಡೆದಿದೆ.
ಕೆಎಸ್ಸಾರ್ಟಿಸಿ ಬಸ್ ಚಾಲಕರಾದ ಪಾಲಾಕ್ಷ ಹಾಗೂ ಶರೀಫ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಮಡಿಕೇರಿಯಿಂದ ಹಾಸನಕ್ಕೆ ತೆರಳುತ್ತಿದ್ದ ಮತ್ತು ಮೈಸೂರಿನಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಗಳ ನಡುವೆ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸಮೀಪದ ಶಾಂತಿಗೇರಿ ಬಳಿ ಅಪಘಾತ ಸಂಭವಿಸಿದೆ.
ಹಾಸನ ಕಡೆಗೆ ತೆರಳುತ್ತಿದ್ದ ಬಸ್ ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಬಸ್ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಎರಡು ಬಸ್ ಚಾಲಕರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಸುಮಾರು 15ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದು, ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಾಗಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಸುಂಟಿಕೋಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








