ಬಿ.ಸಿ.ರೋಡ್-ಬೆಂಗಳೂರು ಕೆಎಸ್ಸಾರ್ಟಿಸಿ ಬಸ್ ಸಂಚಾರಕ್ಕೆ ಸಚಿವ ರೈ ಚಾಲನೆ

ಬಂಟ್ವಾಳ, ಫೆ. 8: ಕೆಎಸ್ಸಾರ್ಟಿಸಿಯ ಪುತ್ತೂರು ವಿಭಾಗದ ಬಿ.ಸಿ.ರೋಡ್ ಘಟಕದಿಂದ ಬಿ.ಸಿ.ರೋಡ್-ಬೆಂಗಳೂರು ನಾನ್ ಎಸಿ ಸ್ಲೀಪರ್ ನೂತನ ಎರಡು ಬಸ್‌ಗಳ ಸಂಚಾರಕ್ಕೆ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಗುರುವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಡೆಲ್ಟಾ ಯೋಜನೆಯಲ್ಲಿ ಬಿ.ಸಿ.ರೋಡ್ ಬಸ್ ನಿಲ್ದಾಣವನ್ನು ಅತ್ಯಾಧುನಿಕವಾಗಿ ನಿರ್ಮಿಸಲಾಗಿದೆ. ಇದು ನಮ್ಮ ಯೋಜನೆ, ಬಿಜೆಪಿಯವರದ್ದಲ್ಲ. ಬಿ.ಸಿ.ರೋಡ್‌ನಲ್ಲಿ ಬಸ್ ನಿಲ್ದಾಣವಾದ ಮೇಲೆ ಇಲ್ಲಿಂದ ಬೆಂಗಳೂರಿಗೆ ಬಸ್ ಸಂಚಾರ ಕಲ್ಪಿಸುವಂತೆ ಸಾರ್ವಜನಿಕರು ಬೇಡಿಕೆಯಿಟ್ಟಿ ದ್ದರು. ಇಂದು ಈ ಬಹುಬೇಡಿಕೆ ಈಡೇರಿದೆ ಎಂದು ಹೇಳಿದರು.
ಈ ಸಾರಿಗೆಗೆ ಆನ್‌ಲೈನ್ ಮೂಲಕ ಮುಂಗಡ ಬುಕ್ಕಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಬಿ.ಸಿ.ರೋಡ್ ಘಟಕದಲ್ಲಿ ಟಿಕೆಟ್ ಬುಕ್ಕಿಂಗ್ ಕೌಂಟರನ್ನು ತೆರೆಯಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಮೆಸ್ಕಾಂ ಸಲಹಾ ಸಮಿತಿಯ ಸದಸ್ಯ ವೆಂಕಪ್ಪ ಪೂಜಾರಿ, ಪ್ರತಿಭಾ ಕುಲಾಯಿ, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ ಶಿರಾಲಿ, ಬಿ.ಸಿ.ರೋಡ್ ಘಟಕದ ವ್ಯವಸ್ಥಾಪಕ ಪಿ.ಇಸ್ಮಾಯಿಲ್, ಸಹಾಯಕ ಕಾರ್ಯ ಅಧೀಕ್ಷಕ ಅಂಥೋನಿ ಲಿಯೋ, ಸಹಾಯಕ ಸಂಚಾರ ಅಧೀಕ್ಷಕ ಭಾಸ್ಕರ ತೊಕ್ಕೊಟ್ಟು, ಸಹಾಯಕರಾದ ನಾರಾಯಣ, ರಮೇಶ್ ಕೆ., ಕೆಎಸ್ಸಾರ್ಟಿಸಿ ಬಸ್ ಚಾಲಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಬಸ್ ಮಾರ್ಗ-ವೇಳಾಪಟ್ಟಿ
ಸದ್ಯ ಉಪ್ಪಿನಂಗಡಿ, ಪುತ್ತೂರು, ಸುಳ್ಯ ಮಡಿಕೇರಿ. ಕುಶಾಲನಗರ, ಅರಕಲಗೂಡು, ಹೊಳೆನರಸೀಪುರ, ಚನ್ನರಾಯಪಟ್ಟಣ, ಕುಣಿಗಲ್ ಮಾರ್ಗವಾಗಿ ಬಸ್ ಬೆಂಗಳೂರಿಗೆ ತೆರಳಲಿದೆ.
ಬಿ.ಸಿ.ರೋಡ್‌ನಿಂದ ರಾತ್ರಿ 9 ಗಂಟೆಗೆ ಹೊರಟು ಬೆಂಗಳೂರಿಗೆ ಮುಂಜಾನೆ 5ಕ್ಕೆ ತಲುಪಲಿದೆ. ಬೆಂಗಳೂರಿನಿಂದ ರಾತ್ರಿ ಗಂಟೆ 9.51ಕ್ಕೆ ಹೊರಟು ಬಿ.ಸಿ.ರೋಡಿಗೆ ಬೆಳಗ್ಗೆ ಗಂಟೆ 5.51ಕ್ಕೆ ತಲುಪಲಿದೆ. ಈ ಸಾರಿಗೆಗೆ ಆನ್‌ಲೈನ್ ಮೂಲಕ ಮುಂಗಡ ಬುಕ್ಕಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಅಲ್ಲದೆ, ಮೆಲ್ಕಾರ್, ಕಲ್ಲಡ್ಕ ಹಾಗೂ ಮಾಣಿಯಲ್ಲಿ ಬೋರ್ಡಿಂಗ್ ಸೌಲಭ್ಯ ಕಲ್ಪಿಸಲಾಗಿದೆ.







