ನರ್ಸರಿಯಿಂದ ಮನೆಗೆ ಬರುತ್ತಿದ್ದ ಮಗುವಿನ ಅಪಹರಣಕ್ಕೆ ಯತ್ನ
ವಾರದಲ್ಲಿ 3ನೆ ಬಾರಿ ದುಷ್ಕರ್ಮಿಗಳ ಕೃತ್ಯ

ಮೂವಾಟ್ಟುಪ್ಪುಳ(ಕೇರಳ), ಫೆ.8: ದುಷ್ಕರ್ಮಿಗಳ ತಂಡವೊಂದು ಹಾಡಹಗಲೇ ತಾಯಿಯ ಜೊತೆ ನರ್ಸರಿಯಿಂದ ಮನೆಗೆ ತೆರಳುತ್ತಿದ್ದ ನಾಲ್ಕುವರ್ಷದ ಗಂಡು ಮಗುವಿನ ಅಪಹರಣಕ್ಕೆ ಯತ್ನಿಸಿದ ಘಟನೆಯೊಂದು ಮೂವಾಟ್ಟುಪುಳದಲ್ಲಿ ನಡೆದಿದೆ.
ನಗರದ ಐದನೆ ವಾರ್ಡ್ ಕಾವುಂಖರ ಕಡವು ಪಾಡ್ ರಸ್ತೆಯಲ್ಲಿ ಬೆಳಗ್ಗೆ ಹತ್ತು ಗಂಟೆಗೆ ಘಟನೆ ನಡೆದಿದ್ದು, ಅಶ್ರಫ್ ಎಂಬವರ ಪುತ್ರ ಅಬಿ(4) ಯನ್ನು ಅಪಹರಿಸಲು ದುಷ್ಕರ್ಮಿಗಳು ಯತ್ನಿಸಿದ್ದರು.
ತಾಯಿ ಜೊತೆಗೆ ಕಡವ್‍ಪಾಡ್‍ನಲ್ಲಿರುವ ನರ್ಸರಿಗೆ ತೆರಳಿದ್ದು, ಆಝಾದ್ ರಸ್ತೆ ಕಡೆಯಿಂದ ಬಂದ ಕಾರನ್ನು ಹತ್ತಲು ಮಗುವಿಗೆ ಕಾರಿನಲ್ಲಿದ್ದವರು ಸೂಚಿಸಿದ್ದಾರೆ. ಇದರಿಂದ ತಾಯಿ ಮಗು ಹೆದರಿ ಓಡಿದ್ದಾರೆ. ಕಾರಿನಿಂದಿಳಿದು ಒಬ್ಬ ಮಗುವನ್ನು ಅಪಹರಿಸಲು ಯತ್ನಿಸಿದ್ದು, ತಾಯಿ ಮಗುವನ್ನು ಎತ್ತಿಕೊಂಡು ಹತ್ತಿರದ ಮನೆಯೊಂದರೊಳಗೆ ಓಡಿ ಹೋಗಿದ್ದಾರೆ.
ನಂತರ ಕಾರು ಕೊತಮಂಗಲಂ ರಸ್ತೆಯಲ್ಲಿ ಹೋಗಿದೆ. ಘಟನೆ ಗಮನಕ್ಕೆ ಬಂದ ನಂತರ ಮೂವಾಟ್ಟುಪ್ಪುಳ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ. ಸೋಮವಾರ ಸಂಜೆ ಮುಳವೂರಿನಲ್ಲಿ ಸಂಜೆ ನಮಾಝ್ ನಿರ್ವಹಿಸಿ ಮರಳುತ್ತಿದ್ದ ಹತ್ತುವರ್ಷದ ಹುಡುಗನನ್ನು ಕಾರಿನಲ್ಲಿ ಬಂದ ತಂಡ ಅಪಹರಿಸಲು ವಿಫಲ ಯತ್ನ ನಡೆಸಿತ್ತು. ಮಂಗಳವಾರ ನಗರದ ಫ್ರೆಶ್ ಕೋಲ ರಸ್ತೆಯಲ್ಲಿ ಮನೆಯೊಳಗೆ ತಾಯಿಯ ಮಡಿಲಿದ್ದ ಒಂದೂವರೆ ವರ್ಷದ ಹೆಣ್ಣುಮಗವನ್ನು ಅಪರಹಿಸಲು ದುಷ್ಕರ್ಮಿಗಳು ಯತ್ನಿಸಿದ್ದರು.





