ಮಠ, ಮಾನ್ಯಗಳ ವಿಚಾರಕ್ಕೆ ಬಂದರೆ ರಾಜ್ಯದಲ್ಲಿ ಧಂಗೆ: ಎಸ್.ಶಿವಣ್ಣ

ತುಮಕೂರು,ಫೆ.08: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಿಂದೂ ಧಾರ್ಮಿಕ ದತ್ತಿ ಕಾಯ್ದೆ 2011ಕ್ಕೆ ತಿದ್ದುಪಡಿ ತರುವ ನೆಪದಲ್ಲಿ ಮಠ,ಮಾನ್ಯಗಳಿಗೆ ಕಡಿವಾಣ ಹಾಕಲು ಹೊರಟಿರುವುದು ರಾಜ್ಯದಲ್ಲಿ ಜನರು ದಂಗೆ ಏಳಲು ಪ್ರೇರೆಪಿಸಿದಂತಿದೆ ಎಂದು ಮಾಜಿ ಸಚಿವ ಎಸ್.ಶಿವಣ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮಠ, ಮಾನ್ಯಗಳು ಜನರ ಬೆವರಿನ ದುಡಿಮೆಯ ಸಂಕೇತ. ಮಠಾಧೀಶರು ಮಠಗಳನ್ನು ಕಟ್ಟಿ ಆ ಮೂಲಕ ಬಡವರಿಗೆ ಅನ್ನ, ಅಕ್ಷರ, ಆಶ್ರಯ ನೀಡಿದ್ದಾರೆ. ಇವುಗಳ ಮೇಲೆ ನಿಯಂತ್ರಣ ಹೇರಲು ಸರಕಾರ ಹೊರಟಿರುವುದು ಸರಿಯಲ್ಲ. ಇದರಿಂದ ದೇಶದಲ್ಲಿ ಧಾರ್ಮಿಕ ಕ್ರಾಂತಿಯಾಗಲಿದೆ. ಭಕ್ತರು ದಂಗೆ ಏಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ನಾವು ಇರುವುದು ಕಮ್ಯುನಿಷ್ಟ ಪಕ್ಷ ಆಡಳಿತದಲ್ಲಿರುವ ಚೀನಾ ದೇಶದಲ್ಲಿ ಇಲ್ಲ, ಪ್ರಜಾಪ್ರಭುತ್ವವಿರುವ ಭಾರತದಲ್ಲಿ ಇದ್ದೇವೆ. ಇಂತಹ ಭಾರತದಲ್ಲಿ ಈ ನಡವಳಿಕೆ ದುರಂತ. ಕೂಡಲೇ ಸರಕಾರ ತಾನು ಹೊರಡಿಸಿರುವ ಸುತ್ತೋಲೆಯನ್ನು ವಾಪಾಸ್ ಪಡೆಯಬೇಕು ಎಂದು ಎಸ್.ಶಿವಣ್ಣ ಆಗ್ರಹಿಸಿದರು.
ಇಂದು ರಾಜ್ಯದಲ್ಲಿ ನಡೆಯುತ್ತಿರುವ ಅನೇಕ ಬಡತನ ನಿಮೂರ್ಲನಾ ಕಾರ್ಯಕ್ರಮಗಳಿಗೆ ಮಠಗಳೇ ಸ್ಪೂರ್ತಿ. ಕಾಯಕ, ದಾಸೋಹ ವೆಂಬ ತತ್ವದ ಅಡಿಯಲ್ಲಿ ನಡೆಯುತ್ತಿರುವ ಮಠಗಳಿಂದ ಪ್ರೇರಿತರಾಗಿಯೇ ಇಂದು ಸಿದ್ದರಾಮಯ್ಯ ಇಂದಿರಾ ಕ್ಯಾಟೀನ್, ಅನ್ನಭಾಗ್ಯ ಇನ್ನಿತರ ಯೋಜನೆಗಳನ್ನು ಜಾರಿಗೆ ತಂದಿರುವುದು. ಸ್ವತಹಃ ಸಿದ್ದರಾಮಯ್ಯ ಕೂಡ ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಓದಿಯೇ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ. ಇದನ್ನು ಮರೆತು ಸರ್ವಾಧಿಕಾರಿಯಂತೆ ವರ್ತಿಸುವುದು ಸರಿಯಲ್ಲ. ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಸುತ್ತೊಲೆಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ಅಪರಾಧ ಪ್ರಕರಣಗಳನ್ನು ಗಮನಿಸಿದರೆ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿರುವುದು ಕಂಡುಬರುತ್ತಿದೆ. ಇರಾನ್‍ನ ಪ್ರಜೆಗಳೆಂದು ಹೇಳಿಕೊಂಡಿರುವ ಕೆಲವರು ಪೆಟ್ರೋಲ್ ಬಂಕ್ ದರೋಡೆಗೆ ಯತ್ನಿಸಿದ್ದಾರೆ. ಆದರೆ ಇದುವರೆಗೂ ಪೊಲೀಸರು ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಿಲ್ಲ. ಅವರು ಇರಾನ್ ದೇಶದವರೇ, ಪಾಕಿಸ್ಥಾನದವರೇ ಎಂಬ ಅನುಮಾನ ಜಿಲ್ಲೆಯ ಜನರನ್ನು ಕಾಡುತ್ತದೆ. ಅಲ್ಲದೆ ಅವರ ದರೋಡೆಗೆ ಬಂದಿದ್ದರೆ ಅಥವಾ ಭಯೋತ್ಪಾಧಕರೇ ಎಂಬುದನ್ನು ಜನತೆಯ ಮುಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಿಚ್ಚಿಡಬೇಕು ಹಾಗೂ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ವಹಿಸಬೇಕು ಎಂದು ಸೊಗಡು ಶಿವಣ್ಣ ಒತ್ತಾಯಿಸಿದರು.
ರೌಡಿಗಳ ಅಟ್ಟಹಾಸ: ಪೊಲೀಸರು ರೌಡಿಗಳು ಮತ್ತು ರಾಜಕಾರಣಿಗಳ ನಡುವಿನ ದಲ್ಲಾಳಿಗಳ ರೀತಿ ವರ್ತಿಸುತ್ತಿದ್ದಾರೆ ಎಂಬುದು ನನ್ನ ಅಭಿಪ್ರಾಯ. ಉತ್ತರ ಕರ್ನಾಟಕದಿಂದ ಕೂಲಿಗಾಗಿ ವಲಸೆ ಬಂದು ಬೈಪಾಸ್ ರಸ್ತೆಗಳ ಬದಿ ಟೆಂಟ್‍ಹಾಕಿ ಬದುಕುತ್ತಿರುವ ಕುಟುಂಬಗಳ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಡೆದಿವೆ. ಅಂತಹ ಕೇಸುಗಳನ್ನು ಪೊಲೀಸರು ಮುಚ್ಚಿ ಹಾಕುತ್ತಿದ್ದಾರೆ. ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದ್ದು, ಇದಕ್ಕೆ ಸ್ಥಳೀಯ ಶಾಸಕರ ಕುಮ್ಮಕ್ಕು ಇದೆ. ರಾತ್ರಿ ವೇಳೆ ಪ್ರಯಾಣಿಸುವವರ ಮೇಲೆ ಹಲ್ಲೆ ಮಾಡಿ ಮೊಬೈಲ್, ಹಣ ಕಸಿಯುವ ಪ್ರಕರಣಗಳು ಹೆಚ್ಚಾಗಿವೆ. ಪೊಲೀಸರು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಎಸ್.ಶಿವಣ್ಣ ಆರೋಪಿಸಿದರು.
ಖಾಸಗಿ ಕಾರ್ಯಕ್ರಮಕ್ಕೆ ಪೊಲೀಸ್ ನಿಯೋಜನೆ ಖಂಡನೀಯ: ಕೆ.ಆರ್.ಬಡಾವಣೆಯಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಕರಣ್ ಟೆಕ್ಸ್ ಟೈಲ್‍ನ ಪ್ರಾರಂಭೋತ್ಸವ ಕಾರ್ಯಕ್ರಮದಂದು ರಸ್ತೆ ಬಂದ್ ಮಾಡಿ, ಸಾರ್ವಜನಿಕರಿಗೆ ತೊಂದರೆ ನೀಡಿರುವುದು ಸರಿಯಲ್ಲ. ಅಲ್ಲದೆ ಅಂಗಡಿ ಮಳಿಗೆಯವರು ನೀಡಿದ್ದ ವಿಶೇಷ ರಿಯಾಯಿತಿ ಸೀರೆ ಪಡೆಯಲು ಮಹಿಳೆಯರು ಮುಗಿಬಿದ್ದು ಸಾಕಷ್ಟು ತೊಂದರೆಗಳಾಗಿವೆ. ಚಿಲುಮೆ ಸಮುದಾಯ ಭವನವನ್ನು ಅತ್ಯಂತ ಕಡಿಮೆ ದರಕ್ಕೆ ನೀಡಿರುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಂ.ಬಿ.ನಂದೀಶ್,ಕೆ.ಪಿ.ಮಹೇಶ್,ಶಾಂತರಾಜು,ನಂಜುಂಡಪ್ಪ,ಹೆಚ್.ಕೆ.ಶಿವಣ್ಣ, ಚಂದನ್, ಎಂ.ಎಸ್.ಚಂದ್ರು, ಮದನ್‍ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.







