ಬಾಗೇಪಲ್ಲಿ: ದ್ವಿಚಕ್ರ ವಾಹನ- ಕಾರು ಪರಸ್ಪರ ಢಿಕ್ಕಿ; ಓರ್ವ ಮೃತ್ಯು

ಬಾಗೇಪಲ್ಲಿ,ಫೆ.08: ದ್ವಿಚಕ್ರ ವಾಹನ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ದ್ವಿಚಕ್ರ ಸವಾರ ಮೃತಪಟ್ಟು, ಮತ್ತೊಬ್ಬರಿಗೆ ಗಾಯವಾಗಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಪರಗೋಡು ಕ್ರಾಸ್ ಬಳಿ ಬುಧವಾರ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಬಾಗೇಪಲ್ಲಿ ತಾಲೂಕಿನ ನೀರಗಂಟಿಪಲ್ಲಿ ಗ್ರಾಮದ ಆದಿನಾರಾಯಣಪ್ಪ(74) ಎಂದು ಗುರುತಿಸಲಾಗಿದ್ದು, ತೀವ್ರ ಗಾಯಗೊಂಡ ವ್ಯಕ್ತಿ ಬಾಲರೆಡ್ಡಿಪಲ್ಲಿ ಗ್ರಾಮದ ಬುಸಪ್ಪ ಎಂದು ತಿಳಿದುಬಂದಿದೆ.
ಇವರಿಬ್ಬರೂ ಭಾವ-ಭಾವಮೈದುನರಾಗಿದ್ದು, ಮದುವೆಯ ಲಗ್ನಪತ್ರಿಕೆಗಳನ್ನು ಹಂಚಲು ಹೋಗುತ್ತಿದ್ದರು ಎಂದು ತಿಳಿದುಬಂದಿದೆ. ಪಂಚಲಿಂಗೇಶ್ವರ ದೇವಸ್ಥಾನದ ಕಡೆಯಿಂದ ಬಂದು ಪರಗೋಡು ಕ್ರಾಸ್‍ನಲ್ಲಿ ಕ್ರಾಸಿಂಗ್ ಮಾಡುವ ಸಂದರ್ಭದಲ್ಲಿ ಬೆಂಗಳೂರು ಕಡೆಯಿಂದ ಅತಿ ವೇಗದಲ್ಲಿದ್ದ ಕೇರಳ ನೊಂದಣಿಯ ಸ್ವಿಫ್ಟ್ ಕಾರು ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ದ್ವಿಚಕ್ರ ವಾಹನದಲ್ಲಿ ಬುಸ್ಸಪ್ಪ ಕಾರಿನ ಗಾಜಿನ ಮೇಲೆ ಬಿದ್ದರೆ, ಆದಿನಾರಾಯಣಪ್ಪ ಸ್ವಲ್ಪ ದೂರಕ್ಕೆ ಎಸೆಯಲ್ಪಟ್ಟಿದ್ದಾರೆ. ಕೂಡಲೇ ಅಂಬುಲೆನ್ಸ್ ಮೂಲಕ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಆದಿನಾರಾಯಣಪ್ಪ ಬೆಂಗಳೂರಿನ ನಿಮ್ಯಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ತೀವ್ರಗಾಯಗೊಂಡಿರುವ ಬುಸ್ಸಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. .
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಮಹಮದ್ ಅಸ್ಲಂ ಆಗಮಿಸಿ ಪರಿಶೀಲನೆ ನಡೆಸಿದರು. ಬಾಗೇಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





