ಬೆಂಬಲ ಯೋಜನೆಯಡಿ ‘ಕಡಲೆ’ ಖರೀದಿಗೆ ಕ್ರಮ: ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು, ಫೆ. 8: ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಕಡಲೆ ಬೆಳೆಗಾರರ ನೆರವಿಗೆ ಧಾವಿಸಲು ಸರಕಾರ ಸಿದ್ಧವಿದ್ದು, ಬೆಂಬಲ ಬೆಲೆ ಯೋಜನೆಯಡಿ ಶೀಘ್ರದಲ್ಲೇ ಕಡಲೆ ಖರೀದಿ ಕೇಂದ್ರ ಆರಂಭಿಸಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ.
ಗುರುವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಜೆಡಿಎಸ್‌ನ ಕೋನರೆಡ್ಡಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ಈಗಾಗಲೇ ನೋಂದಣಿ ಕಾರ್ಯ ನಡೆಯುತ್ತಿದ್ದು, ಫೆ.23ರ ವರೆಗೂ ನೋಂದಣಿಗೆ ಅವಕಾಶವಿದೆ. ಆದರೆ, ಆರಂಭದಲ್ಲಿ ನೋಂದಣಿ ನಿಧಾನಗತಿಯಲ್ಲಿ ನಡೆಯುತ್ತಿದೆ.
ರಾಜ್ಯದಲ್ಲಿ 33ಲಕ್ಷ ಎಕರೆ ಪ್ರದೇಶದಲ್ಲಿ ಕಡಲೆ ಬೆಳೆದಿದ್ದು 80ಲಕ್ಷದಿಂದ 90ಲಕ್ಷ ಕ್ವಿಂಟಾಲ್ ಬೆಳೆ ಬಂದಿದೆ. ಆದರೆ, ಕೇಂದ್ರ ಸರಕಾರ ಎಂಎಸ್‌ಪಿ ಯೋಜನೆಯಡಿ 20 ಲಕ್ಷ ಕ್ವಿಂಟಾಲ್ ಖರೀದಿಗೆ ಅವಕಾಶ ಕಲ್ಪಿಸಿದೆ. ಹೀಗಾಗಿ ಆ ಪ್ರಮಾಣ ಹೆಚ್ಚಳಕ್ಕೆ ಇಂದೇ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಕಡಲೆ ಖರೀದಿಗೆ ಹೆಸರು ನೋಂದಾಯಿಸಲು ಪಹಣಿಯಲ್ಲಿ ಕಡಲೆ ಉಲ್ಲೇಖ ಕಡ್ಡಾಯ ಎಂಬ ನಿಬಂಧನೆ ಸಡಿಲಿಸಲಾಗುವುದು. ಅಲ್ಲದೆ, ಕನಿಷ್ಠ 50ಲಕ್ಷ ಕ್ವಿಂಟಾಲ್ ಖರೀದಿಗೆ ಒಪ್ಪಿಗೆ ನೀಡಲು ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದ ಅವರು, ಬ್ಯಾಂಕ್ ಖಾತೆ ನೀಡುವುದು ಕಡ್ಡಾಯ ಎಂದು ಪ್ರಕಟಿಸಿದರು.
ಬೆಂಬಲ ಬೆಲೆ ಯೋಜನೆಯಡಿ ಕಡಲೆ ಖರೀದಿಗೆ ಅನುದಾನದ ಕೊರತೆ ಇಲ್ಲ. ಕೇಂದ್ರ ಸರಕಾರದ ಒಪ್ಪಿಗೆ ಅಗತ್ಯ. ಏಕಾಏಕಿ ಉತ್ಪನ್ನ ಖರೀದಿಗೆ ಕಷ್ಟ. ಈ ಸಂಬಂಧ ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟು ರೈತರ ನೆರವಿಗೆ ಧಾವಿಸಲು ಸರಕಾರ ಕ್ರಮ ವಹಿಸಲಿದೆ ಎಂದು ಅವರು ತಿಳಿಸಿದರು.







