ಯಶಸ್ಸಿಗೆ ಸಂಘಟಿತ ಪ್ರಯತ್ನ ಅಗತ್ಯ: ಕಿರಣ್‌ಕುಮಾರ್
ಬೆಂಗಳೂರು ವಿಶ್ವವಿದ್ಯಾಲಯದ ‘53ನೆ ವಾರ್ಷಿಕ ಘಟಿಕೋತ್ಸವ

ಬೆಂಗಳೂರು, ಫೆ.8: ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಸಂಘಟಿತ ಪ್ರಯತ್ನ ಮುಖ್ಯವಾಗಿದ್ದು, ಅದಕ್ಕೆ ಪೂರಕವಾದ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕು ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆಯ(ಇಸ್ರೋ) ಮಾಜಿ ಅಧ್ಯಕ್ಷ ಕಿರಣ್‌ಕುಮಾರ್ ಸಲಹೆ ನೀಡಿದರು.
ಗುರುವಾರ ಬೆಂಗಳೂರು ವಿಶ್ವವಿದ್ಯಾಲಯದ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘53ನೆ ವಾರ್ಷಿಕ ಘಟಿಕೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಒಂದು ಯೋಜನೆಯನ್ನು ಕೇವಲ ಒಬ್ಬ ವ್ಯಕ್ತಿಯಿಂದ ಯಶಸ್ವಿಗೊಳಿಸಲು ಸಾಧ್ಯವಿಲ್ಲ. ಒಬ್ಬರು ಮತ್ತೊಬ್ಬರ ಜ್ಞಾನ, ಅನುಭವ ವಿನಿಮಯ ಮಾಡಿಕೊಳ್ಳುತ್ತಾ ಯಶಸ್ಸಿನತ್ತ ಸಾಗಬೇಕಾಗುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬರ ಜೀವನದ ಯಶಸ್ಸಿಗೆ ಜ್ಞಾನವೆ ಆಧಾರ. ಸಾಹಿತ್ಯ, ತತ್ವಶಾಸ್ತ್ರ ಹಾಗೂ ಇತಿಹಾಸದ ಜ್ಞಾನ ಅನುಭವವನ್ನು ಅರಿಯಬೇಕು. ಕಲೆ, ವಿಜ್ಞಾನ ಸೇರಿದಂತೆ ಯಾವುದೇ ಒಂದು ಕ್ಷೇತ್ರವು ಸ್ವತಂತ್ರವಾಗಿ ಇರುವುದಿಲ್ಲ. ಪ್ರತಿಯೊಂದು ಕ್ಷೇತ್ರವು ಮತ್ತೊಂದು ಕ್ಷೇತ್ರದೊಂದಿಗೆ ಪೂರಕವಾದ ಸಂಬಂಧವನ್ನು ಇಟ್ಟುಕೊಂಡಿರುತ್ತದೆ. ಹೀಗಾಗಿ ವಿಜ್ಞಾನ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ, ಕಲೆ, ಸಾಹಿತ್ಯ ಕ್ಷೇತ್ರಗಳ ಜ್ಞಾನವು ಅಗತ್ಯವಾಗಿರುತ್ತದೆ ಎಂದು ಅವರು ತಿಳಿಸಿದರು.
ಎಲ್ಲವೂ ವೈಜ್ಞಾನಿಕ ತಳಹದಿಯ ಮೇಲೆಯೆ ನಿರ್ಮಾಣವಾಗಿದ್ದು, ಇದೇ ಕಲೆ ಮತ್ತು ವಿಜ್ಞಾನಕ್ಕೆ ನಂಟು ಹೊಂದಿರುತ್ತದೆ. ಹೀಗಾಗಿ ತಮ್ಮ ಕ್ಷೇತ್ರಗಳಲ್ಲಿ ಉನ್ನತ ಮಟ್ಟದ ಸಂಶೋಧನೆ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ರೂಢಿಸಿಕೊಳ್ಳುವುದು ಅಗತ್ಯವಿದೆ ಎಂದು ಅವರು ಆಶಿಸಿದರು.
ಮಾನವನ ದೈನಂದಿನ ಕೆಲಸಗಳಿಗೆ ವೈಜ್ಞಾನಿಕ ಸಲಕರಣೆ ಅಗತ್ಯವಾಗಿರುವುದರಿಂದ ವಿದ್ಯಾರ್ಥಿಗಳು ವಿಜ್ಞಾನದತ್ತ ಹೆಚ್ಚು ಗಮನ ಹರಿಸಬೇಕು. ಹಾಗೂ ಮಾಹಿತಿ ತಂತ್ರಜ್ಞಾನವನ್ನು ಸಂಶೋಧನೆಗೆ ಪೂರಕವಾಗಿ ಬಳಸಿಕೊಳ್ಳಬೇಕು. ಪದವಿ ಪಡೆದಿರುವ ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರಗಳತ್ತ ಹೆಚ್ಚು ಗಮನ ಹರಿಸಬೇಕು ಎಂದು ಅವರು ಹೇಳಿದರು.
ಹಂಗಾಮಿ ಕುಲಪತಿ ಪ್ರೊ.ವಿ.ಸುದೇಶ್ ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದರೆ ಉನ್ನತ ಶ್ರೇಣಿಯನ್ನು ಪಡೆದ ವಿದ್ಯಾರ್ಥಿಗಳ ಸಂಖ್ಯೆ ಈ ವರ್ಷ ಹೆಚ್ಚಾಗಿದೆ. ರ್ಯಾಂಕ್ ಪಡೆದ 79 ವಿದ್ಯಾರ್ಥಿಗಳಿಗೆ ಹಾಗೂ ದತ್ತಿ ಬಹುಮಾನ ಪಡೆದ 33 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಗಿದೆ ಎಂದು ಅವರು ಹೇಳಿದರು.
ಪ್ರಸಕ್ತ ಸಾಲಿನಲ್ಲಿ 23,846 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 19,704 ಪ್ರಥಮದರ್ಜೆ, 6,168 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 158 ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಪಡೆದಿದ್ದಾರೆ ಎಂದು ಅವರು ವಿವರಿಸಿದರು. ಈ ವೇಳೆ ಕುಲ ಸಚಿವ ಬಿ.ಕೆ.ರವಿ ಉಪಸ್ಥಿತರಿದ್ದರು.
ಚಿನ್ನದ ಪದಕ ನೀಡಲಾಗುವುದು ಎಂದು ಘಟಿಕೋತ್ಸವಕ್ಕೆ ಬರಮಾಡಿಕೊಂಡು ಕೇವಲ ಪ್ರಮಾಣ ಪತ್ರವನ್ನು ನೀಡಲಾಗಿದೆ ಎಂದು ಹಲವು ವಿದ್ಯಾರ್ಥಿಗಳು ಹಂಗಾಮಿ ಕುಲಪತಿ ಪ್ರೊ.ವಿ.ಸುದೇಶ್ ಮುಂದೆ ಆಕ್ರೋಶ ವ್ಯಕ್ತಪಡಿಸಿದರು. ದೂರದ ತಮಿಳುನಾಡು, ಆಂಧ್ರಪ್ರದೇಶದಿಂದ ಬಂದಿದ್ದೇವೆ. ಮೊದಲೆ ಹೇಳಿದ್ದರೆ ಸಾವಿರಾರು ರೂ.ಖರ್ಚು ಮಾಡಿಕೊಂಡು ಇಲ್ಲಿಯವರೆಗೆ ಬರುತ್ತಿರಲಿಲ್ಲವೆಂದು ಹಲವು ವಿದ್ಯಾರ್ಥಿಗಳು ಬೆಂಗಳೂರು ವಿಶ್ವವಿದ್ಯಾಲಯದ ವಿರುದ್ಧ ಬೇಸರ ವ್ಯಕ್ತಪಡಿಸಿದರು.







