ಕಸ್ತೂರಿ ರಂಗನ್ ವರದಿ ತಿರಸ್ಕಾರಕ್ಕೆ ಶಿಫಾರಸು: ಸಚಿವ ರೈ
ಮಂಗಳೂರು, ಫೆ.8: ಪಶ್ಚಿಮ ಘಟ್ಟ ಸಂರಕ್ಷಣೆಗಾಗಿ ಡಾ.ಕೆ. ಕಸ್ತೂರಿ ರಂಗನ್ 2017ರಲ್ಲಿ ಸಲ್ಲಿಸಿರುವ ವರದಿಯನ್ನು ತಿರಸ್ಕರಿಸಲು ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಶಿಫಾರಸು ಮಾಡಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ರೈ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿ ಕೇಂದ್ರ ಸರಕಾರವು ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳನ್ನು ಸಲ್ಲಿಸಲು ಸೂಚನೆ ನೀಡಿದ ಹಿನ್ನೆಲೆಯಲ್ಲಿ 2017ರ ಎಪ್ರಿಲ್ 22ರಂದು ರಾಜ್ಯ ಸರಕಾರ ಆಕ್ಷೇಪಣೆ ಸಲ್ಲಿಸಿದೆ. ಅಲ್ಲದೆ ಡಾ. ಕೆ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ಶಿಫಾರಸ್ಸು ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಸರಕಾರ2017ರ ಮೇ 26ರಂದು ಮತ್ತೊಮ್ಮೆ ಹೆಚ್ಚುವರಿ ಮಾಹಿತಿ ಕೋರಿತ್ತು. 2017ರ ಜುಲೈ 27ರಂದು ಮಾಹಿತಿ ಒದಗಿಸಲಾಗಿದ್ದು, ಪ್ರಸ್ತುತ ಈ ವಿಷಯವು ಕೇಂದ್ರ ಸರಕಾರದ ಹಂತದಲ್ಲಿ ಬಾಕಿ ಇದೆ ಎಂದರು.
ರಾಜ್ಯದ ಮೈಸೂರು, ಚಾಮರಾಜನವರ, ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಉಡುಪಿ, ಉ.ಕ., ದ.ಕ. ಮತ್ತು ಬೆಳಗಾವಿ ಜಿಲ್ಲೆಗಳ 33 ತಾಲೂಕಿನ 1,576 ಗ್ರಾಮಗಳ 20,668 ಚ.ಕಿ.ಮೀ. ಭೂಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಉದ್ದೇಶಿಸಿದೆ. ಆದರೆ ವಾಸದ ಮತ್ತು ವ್ಯವಸಾಯದ ಭೂಮಿಯ ಮಾಲಕತ್ವದ ಮೇಲೆ ಪರಿಣಾಮ ಇರುವುದಿಲ್ಲ ಎಂದು ಸಚಿವ ರಮಾನಾಥ ರೈ ಉತ್ತರಿಸಿದರು.





