ತುಮಕೂರು: ಆಟೋ ಚಾಲನಕ ಹತ್ಯೆ ಪ್ರಕರಣದ ಸೂಕ್ತ ತನಿಖೆಗೆ ಆಗ್ರಹ

ತುಮಕೂರು,ಫೆ.08: ಆಟೋ ಚಾಲಕ ನದೀಮ್ ಹತ್ಯೆ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಹಾಗೂ ಸೂಕ್ತ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಹಾಗೂ ಕಾರು, ಆಟೋ ಚಾಲಕರ ಒಕ್ಕೂಟ ರಾಜ್ಯ ಕಾರ್ಯದರ್ಶಿ ಬಿ.ಜೆ.ನಟರಾಜೇಗೌಡ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಮೃತರ ಕುಟುಂಬದ ಸದಸ್ಯರೊಟ್ಟಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, ಮನೆಯ ಯಾಜಮಾನ ಮೃತಪಟ್ಟಿರುವುದರಿಂದ ಕುಟುಂಬ ಸಂಕಷ್ಟಕ್ಕೆ ಸಲುಕಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಮೃತ ಆಟೋ ಚಾಲಕನ ಕುಟುಂಬಕ್ಕೆ 10 ಲಕ್ಷ ರೂ ಸಹಾಯಧನ ನೀಡಬೇಕು. ಆಶ್ರಯ ಯೋಜನೆಯಡಿ ನಿರ್ಮಾಣವಾಗಿರುವ ವಸತಿ ಸಮುಚ್ಚಯದಲ್ಲಿ ಮನೆ ನೀಡಬೇಕು ಹಾಗೂ ಜೀವನ ನಿರ್ವಹಣೆಗಾಗಿ ಸರಕಾರಿ ಕಚೇರಿಯಲ್ಲಿ ಕುಟುಂಬದ ಓರ್ವ ಸದಸ್ಯರಿಗೆ ನೌಕರಿ ಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಆಟೋ ಚಾಲಕ ಸಾವಿಗೆ ನ್ಯಾಯ ಸಿಗಬೇಕು, ಆತನ ಕುಟುಂಬಕ್ಕೆ ಸರಕಾರ ನೆರವು ನೀಡಬೇಕು. ಇಲ್ಲವಾದರೆ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿರುವ ಅವರು, ಇದೇ ಮನವಿಯನ್ನು ರಾಜ್ಯದ ಕಾನೂನು ಸಚಿವರು, ಸಂಸದರು, ತುಮಕೂರು ನಗರ ಶಾಸಕರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಮಹಾನಗರ ಪಾಲಿಕೆ ಆಯಕ್ತರಿಗೆ ಸಲ್ಲಿಸುವ ಮೂಲಕ ಮೃತನ ಕುಟುಂಬಕ್ಕೆ ಸೌಲಭ್ಯ ನೀಡುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮೃತ ಆಟೋ ಚಾಲಕನ ಪತ್ನಿ ಆಪ್ಸರ್ ಬೇಗಂ, ತುಮಕೂರು ನಗರ ಆಟೋ ಡೀಲರ್ಸ್, ಏಜೆಂಟ್ಸ್ ಮತ್ತು ಫೈನಾನ್ಸಿರ್ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್.ಎಂ.ಎನ್.ಇತರರಿದ್ದರು.







