ಫೆ. 9ರಿಂದ ಬಂದರು ನಗರಿಯಲ್ಲಿ ‘ಕರ್ನಾಟಕ ಹಕ್ಕಿಹಬ್ಬ’

ಮಂಗಳೂರು, ಫೆ.8: ಬಂದರು ನಗರಿಯೆಂದೇ ಖ್ಯಾತಿಯಾಗಿರುವ ಮಂಗಳೂರು ನಗರ ಹಕ್ಕಿಗಳ ಕಲರವಕ್ಕೆ ಸಿದ್ಧತೆ ನಡೆಸಿದೆ. ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವೃತ್ತ ಹಾಗೂ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಫೆ. 9ರಿಂದ 11ರವರೆಗೆ ‘ಕರ್ನಾಟ ಹಕ್ಕಿಹಬ್ಬ’ ವನ್ನು ಆಯೋಜಿಸಲಾಗಿದೆ.
ರಂಗನತಿಟ್ಟು, ದಾಂಡೇಲಿ ಹಾಗೂ ಬಳ್ಳಾರಿಯಲ್ಲಿ ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿರುವ ‘ಹಕ್ಕಿ ಹಬ್ಬ’ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ನಡೆಯುತ್ತಿದೆ. ವಿಶೇಷವೆಂದರೆ ಸಮುದ್ರದಲ್ಲಿರುವ ಅಪರೂಪದ ಹಕ್ಕಿಗಳ ವೀಕ್ಷಣೆ ಹಾಗೂ ಛಾಯಾಗ್ರಹಣಕ್ಕೆ ಈ ಹಬ್ಬದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಫೆ.9ರಿಂದ 11ರವರೆಗೆ ಅಪರೂಪದ ‘ಹಕ್ಕಿ ಹಬ್ಬ’ ಮಂಗಳೂರಿನಲ್ಲಿ ಸಂಯೋಜನೆಗೊಂಡಿದೆ. ಹಕ್ಕಿಗಳ ಕುರಿತ ಆಸಕ್ತ ಮನಸ್ಸುಗಳಿಗೆ ಹಾಗೂ ಹಕ್ಕಿಗಳ ಬಗ್ಗೆ ಅಧ್ಯಯನಶೀಲರಿಗೆ ಉಪಯೋಗವಾಗುವ ನೆಲೆಯಲ್ಲಿ ಮತ್ತು ಪರಿಸರ-ಹಕ್ಕಿ ಪ್ರೀತಿ ಜನರಲ್ಲಿ ಮೂಡುವಂತಾಗಲಿ ಎಂಬ ನೆಲೆಯಿಂದ ಹಕ್ಕಿ ಹಬ್ಬವನ್ನು ಸಂಘಟಿಸಲಾಗಿದೆ.
ಮಂಗಳೂರಿನ ಸಮುದ್ರದಲ್ಲಿ ಸರಿ ಸುಮಾರು 10-15 ಕಿ.ಮೀನಷ್ಟು ದೂರದವರೆಗೆ ಹಕ್ಕಿ ಪ್ರಿಯರನ್ನು ಬೋಟು ಮೂಲಕ ಕರೆದುಕೊಂಡು ಹೋಗಿ ಅಲ್ಲಿ ಹಕ್ಕಿಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಪಣಂಬೂರು ಕಡಲ ಕಿನಾರೆಯಿಂದ ಕೆಲವು ಬೋಟುಗಳನ್ನು ಪಡೆದುಕೊಳ್ಳುವ ಪ್ರಕ್ರಿಯೆ ಕೂಡ ನಡೆದಿದೆ. ಸಮುದ್ರದಲ್ಲಿರುವ ಅಪರೂಪದ ಹಕ್ಕಿಗಳ ಕುರಿತು ಅಭ್ಯಸಿಸುವ ಹಾಗೂ ಛಾಯಾಚಿತ್ರ ತೆಗೆಯಲು ಅವಕಾಶವಿದೆ. ಅಂಡಮಾನ್, ನಿಕೋಬಾರ್ ವ್ಯಾಪ್ತಿಯಲ್ಲಿ ಹಕ್ಕಿಗಳ ಬಗ್ಗೆ ಅಭ್ಯಸಿಸಿದ ತಜ್ಞರು ಕೂಡ ಈ ಸಂದರ್ಭದಲ್ಲಿ ಜತೆಗಿರಲಿದ್ದಾರೆ.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಅರಣ್ಯ ಸಚಿವರೂ ಆಗಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿಯೇ ಹಕ್ಕಿ ಹಬ್ಬ ಆಚರಣೆ ನಡೆಸಬೇಕು ಎಂಬ ಕಳಕಳಿಯಿಂದ ಮೊದಲ ಬಾರಿಗೆ ಮಂಗಳೂರಿನಲ್ಲಿ ಈ ಬಾರಿ ಹಕ್ಕಿ ಹಬ್ಬದ ಭಾಗ್ಯ ದೊರಕಿದೆ. ಫೆ.9ರಂದು ಬೆಳಗ್ಗೆ 11 ರ ಸುಮಾರಿಗೆ ಮಂಗಳೂರು ಪುರಭವನದಲ್ಲಿ ಹಕ್ಕಿ ಹಬ್ಬದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ಹಾಗೂ ಸಂಜೆಯ ನಿಗದಿತ ಸಮಯದಲ್ಲಿ ಕುದುರೆಮುಖ, ಕುಂದಾಪುರ ಸೇರಿದಂತೆ ಹಕ್ಕಿಗಳು ಅಧಿಕ ಸಂಚಾರವಿರುವ ಪ್ರದೇಶಗಳಿಗೆ ಭೇಟಿ ನೀಡಲಾಗುತ್ತದೆ. ಇದರ ಮಧ್ಯದ ಸಮಯದಲ್ಲಿ ಹಕ್ಕಿಗಳ ಕುರಿತ ನುರಿತ ರಿಂದ ಛಾಯಾಚಿತ್ರ ಪ್ರದರ್ಶನ, ಸಮಾಲೋಚನಾ ಸಭೆ ಕೂಡ ಆಯೋಜಿಸಲಾಗಿದೆ.
ಕರ್ನಾಟಕ ಹಕ್ಕಿ ಹಬ್ಬದ ಅಂಗವಾಗಿ ಫೆ.9 ರಂದು ಬೆಳಗ್ಗೆ 11 ಗಂಟೆಗೆ ಜಾಗೃತಿ ಜಾಥಾ ನಡೆಯಲಿದೆ. 10 ರಂದು ಪಿಲಿಕುಳದ ವಿಜ್ಞಾನ ಭವನದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಹಕ್ಕಿಗಳ ಚಿತ್ರಕಲಾ ಕಾರ್ಯಾಗಾರ ಮತ್ತು ರಸಪ್ರಶ್ನೆ ಕಾರ್ಯಕ್ರಮಗಳು ನಡೆಯಲಿದ್ದು, ಫೆಬ್ರವರಿ 11 ರಂದು ಸಮುದ್ರದಲ್ಲಿ ಹಕ್ಕಿಗಳ ವೀಕ್ಷಣೆಯೂ ನಡೆಯಲಿದೆ ಎಂದು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.







