ರಜಿನಿ ಜೊತೆ ರಾಜಕೀಯ ಹೊಂದಾಣಿಕೆ : ಕಮಲ್ ಹಾಸನ್ ಹೇಳಿದ್ದೇನು ?
.jpg)
ಚೆನ್ನೈ, ಫೆ.8: ಶೀಘ್ರದಲ್ಲೇ ರಾಜಕೀಯ ರಂಗ ಪ್ರವೇಶಿಸಲು ಸಿದ್ಧತೆ ಪೂರ್ಣಗೊಳಿಸಿರುವ ಕಮಲ್ ಹಾಸನ್, ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳಬೇಕೇ ಎಂಬುದರ ಕುರಿತು ತಾನು ಹಾಗೂ ರಜಿನಿಕಾಂತ್ ಪರಿಶೀಲನೆ ನಡೆಸಬೇಕಿದೆ ಎಂದಿದ್ದಾರೆ.
ಜತೆಗೂಡಿ ಚುನಾವಣೆ ಎದುರಿಸುವ ಬಗ್ಗೆ ಈಗಾಗಲೇ ತಮ್ಮಿಬ್ಬರನ್ನೂ ಹಲವಾರು ಬಾರಿ ಪ್ರಶ್ನಿಸಲಾಗಿದೆ. ಈ ವಿಷಯದಲ್ಲಿ ರಜಿನಿಕಾಂತ್ ಅವರ ನಿಲುವನ್ನು ತಾನು ಸಮರ್ಥಿಸುವುದಾಗಿ ಹೇಳಿದ ಅವರು, ರಜಿನಿಕಾಂತ್ ಮತ್ತು ತನ್ನ ವಿಚಾರಧಾರೆಗಳು ವಿಭಿನ್ನವಾಗಿರುವ ಕಾರಣ ಈ ಕ್ರಮದ ಅಗತ್ಯವಿದೆಯೇ ಎಂಬುದನ್ನೂ ಇಬ್ಬರೂ ಪರಿಶೀಲನೆ ನಡೆಸಬೇಕಿದೆ ಎಂದು ಹೇಳಿದ್ದಾರೆ.
ಈ ಪ್ರಶ್ನೆಗೆ ಸಮಯವೇ ಉತ್ತರಿಸಲಿದೆ ಎಂದು ರಜಿನಿ ಹೇಳಿದ್ದರು. ಇದಕ್ಕೆ ನನ್ನ ಸಹಮತವಿದೆ ಎಂದು ತಮಿಳು ಮ್ಯಾಗಝಿನ್ ‘ಆನಂದ ವಿಕಟನ್’ನಲ್ಲಿ ಪ್ರಕಟವಾಗುವ ಸಾಪ್ತಾಹಿಕ ಕಾಲಂನಲ್ಲಿ ಕಮಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಬ್ಬರೂ ಮೊದಲು ತಮ್ಮ ರಾಜಕೀಯ ಪಕ್ಷಗಳಿಗೆ ಅಧಿಕೃತ ಚಾಲನೆ ನೀಡಬೇಕಾಗಿದೆ. ಬಳಿಕ ತಮ್ಮ ಪಕ್ಷದ ಕಾರ್ಯನೀತಿಗೆ ಹೊಂದಿಕೊಂಡು ನಿರ್ಣಯ ಕೈಗೊಳ್ಳಬೇಕಿದೆ. ಆದ್ದರಿಂದ ಈ ಕುರಿತ ನಿರ್ಧಾರವನ್ನು ಈಗಲೇ ಕೈಗೊಳ್ಳಲಾಗದು. ಇದು ಸಿನೆಮದಲ್ಲಿ ಪಾತ್ರ ವಹಿಸುವುದಕ್ಕಿಂತ ಭಿನ್ನ ವಿಚಾರ ಎಂದರು.
ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ನಿಧನರಾಗಿರುವುದು ಹಾಗೂ ಇನ್ನೋರ್ವ ಪ್ರಭಾವೀ ಮುಖಂಡ, ಮಾಜಿ ಮುಖ್ಯಮಂತ್ರಿ ಕರುಣಾನಿಧಿ ವೃದ್ದಾಪ್ಯದ ಕಾರಣ ಅನಾರೋಗ್ಯದಿಂದಿರುವ ಹಿನ್ನೆಲೆಯಲ್ಲಿ, ತಮಿಳುನಾಡಿನಲ್ಲಿ ಸೃಷ್ಟಿಯಾಗಿರುವ ರಾಜಕೀಯ ಪರಿಸ್ಥಿತಿಯ ಲಾಭ ಪಡೆಯುವುದು ತಮಿಳುನಾಡಿನ ಇಬ್ಬರು ಸೂಪರ್‌ಸ್ಟಾರ್‌ಗಳಾದ ರಜಿನಿಕಾಂತ್ ಹಾಗೂ ಕಮಲಹಾಸನ್ ಅವರ ಆಶಯವಾಗಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.







