ಉ.ಪ್ರದೇಶ: ವಿದ್ಯುತ್ ಉತ್ಪಾದಕ ಸಂಸ್ಥೆಗಳಿಗೆ 10,000 ಕೋಟಿ ರೂ. ಬಾಕಿ!

ಲಕ್ನೊ, ಫೆ.8: ಗ್ರಾಹಕರಿಂದ ತನಗೆ ಬರಬೇಕಾದ ಬಾಕಿ ಮೊತ್ತವನ್ನು ಪಡೆಯಲು ಒತ್ತಡ ತಂತ್ರವನ್ನು ಬಳಸಲು ಮುಂದಾಗಿರುವ ಉತ್ತರ ಪ್ರದೇಶ ವಿದ್ಯುಚ್ಛಕ್ತಿ ಮಂಡಳಿಯು ವಿದ್ಯುತ್ ಉತ್ಪಾದಕ ಸಂಸ್ಥೆಗಳಿಗೆ ನೀಡಬೇಕಾದ ಬಾಕಿ ಮೊತ್ತವನ್ನು ನೀಡಲು ಪರದಾಡುತ್ತಿದೆ.
ಈಗಾಲೇ ಮಂಡಳಿಯು ವಿದ್ಯುತ್ ಉತ್ಪಾದಕ ಸಂಸ್ಥೆಗಳಿಗೆ 10,000 ಕೋಟಿ ರೂ. ಬಾಕಿಯಿರಿಸಿದ್ದು ಈ ಸಂಸ್ಥೆಗಳು ತಮ್ಮ ಮೊತ್ತವನ್ನು ಶೀಘ್ರ ನೀಡುವಂತೆ ಆಗ್ರಹಿಸುತ್ತಿವೆ. ಎನ್‌ಟಿಪಿಸಿ, ಎನ್‌ಎಚ್‌ಪಿಸಿ, ಬಜಾಜ್, ರಿಲಾಯನ್ಸ್ ಮತ್ತು ಉತ್ಪಾದನಾ ನಿಗಮವು ಉ.ಪ್ರ ವಿದ್ಯುಚ್ಛಕ್ತಿ ಮಂಡಳಿಗೆ ಪ್ರಮುಖ ವಿದ್ಯುತ್ ಪೂರೈಕೆ ಸಂಸ್ಥೆಗಳಾಗಿವೆ. ಇವುಗಳಲ್ಲಿ ಕೆಲವು ಸಂಸ್ಥೆಗಳಿಗೆ ಮಂಡಳಿಯು ಮಾರ್ಚ್ 2017ರಿಂದ ಬಿಲ್ ಪಾವತಿಸುವುದು ಬಾಕಿಯಿದೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.
ಉ.ಪ್ರ ವಿದ್ಯುಚ್ಛಕ್ತಿ ಮಂಡಳಿಯ ದುರ್ಬಲ ಆರ್ಥಿಕ ಪರಿಸ್ಥಿತಿಯು ಕಂಪೆನಿಯು ಪೂರೈಕೆದಾರರಿಗೆ ಬಿಲ್ ಮೊತ್ತವನ್ನು ಸರಿಯಾಗಿ ಪಾವತಿಸದಿರುವಂತೆ ಮಾಡಿದೆ. ಹಾಗಾಗಿ ಇಲಾಖೆಯ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ನಾವು ಹಳೆಯ ಬಾಕಿಯನ್ನು ವಸೂಲಿ , ವಿದ್ಯುತ್ ಕಳ್ಳತನ ತಡೆ ಹಾಗೂ ಇತರ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಮಂಡಳಿಯ ಮುಖ್ಯಸ್ಥರಾದ ಅಲೋಕ್ ಕುಮಾರ್ ತಿಳಿಸಿದ್ದಾರೆ. ಮಂಡಳಿಯು ರಾಜ್ಯ ವಿದ್ಯುತ್ ಉತ್ಪಾದನಾ ನಿಗಮಕ್ಕೆ ಸುಮಾರು 7,000 ಕೋಟಿ ರೂ. ಬಿಲ್ ಬಾಕಿಯುಳಿಸಿದೆ. ಉತ್ಪಾದನಾ ನಿಗಮ ಕೂಡಾ ಸರಕಾರಿ ಸ್ವಾಮ್ಯದ ಸಂಸ್ಥೆಯಾಗಿರುವ ಕಾರಣ ಸಿಕ್ಕಷ್ಟು ಬಿಲ್ ಮೊತ್ತವನ್ನು ಪಡೆದು ಸುಮ್ಮನಾಗುತ್ತದೆ ಎಂದು ಮಾಧ್ಯಮಗಳು ತಿಳಿಸಿವೆ.







