ಚಾಲುಕ್ಯ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದಲ್ಲಿ ಜನಪ್ರತಿನಿಧಿಗಳಿಗೆ ಸ್ಥಾನ: ಉಮಾಶ್ರೀ

ಬೆಂಗಳೂರು, ಫೆ.8: ಚಾಲುಕ್ಯ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರಕ್ಕೆ ಸ್ಥಳೀಯ ಜನಪ್ರತಿನಿಧಿಗಳನ್ನು ನೇಮಿಸಿಕೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದರು.
ಗುರುವಾರ ವಿಧಾನಪರಿಷತ್‌ನಲ್ಲಿ ವಿಧಾನಸಭೆಯಿಂದ ಅಂಗೀಕಾರವಾದ ಚಾಲುಕ್ಯ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ ವಿಧೇಯಕ-2017 ಮಂಡಿಸಲು ಮುಂದಾದರು. ಈ ವೇಳೆ ಜೆಡಿಎಸ್ ರಮೇಶ್‌ಬಾಬು, ಪ್ರಾಧಿಕಾರ ರಚನೆಗೆ ನಮ್ಮ ವಿರೋಧವಿಲ್ಲ. ಆದರೆ, ಪ್ರಾಧಿಕಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಅವಕಾಶವಿಲ್ಲದಾಗಿದೆ. ಇದರಿಂದ ಪ್ರಾಧಿಕಾರದ ಮೂಲಕ ರಚನಾತ್ಮಕವಾಗಿ ಸಭೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ.
ಈಗಾಗಲೇ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಕನಿಷ್ಠ ಸುಮಾರು 40 ಸಮಿತಿಗಳಿಗೆ ಅಧ್ಯಕ್ಷರಾಗಿರುತ್ತಾರೆ. ಇವರಿಗೆ ಜಿಲ್ಲೆಯ ಸಂಪೂರ್ಣ ಉಸ್ತುವಾರಿ ಇರುತ್ತದೆ. ಇದರ ಜೊತೆಗೆ ಚಾಲುಕ್ಯ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರಕ್ಕೂ ಅವರೇ ಅಧ್ಯಕ್ಷರಾದರೆ, ಪ್ರಾಧಿಕಾರಕ್ಕೆ ಸಂಬಂಧಿಸಿದ ಕೆಲಸಗಳು ಪರಿಣಾಮಕಾರಿಯಾಗಿ ನಡೆಯುವುದಿಲ್ಲ. ಹೀಗಾಗಿ ಸ್ಥಳೀಯ ಜನಪ್ರತಿನಿಧಿಯೊಬ್ಬರನ್ನು ಪ್ರಾಧಿಕಾರಕ್ಕೆ ನೇಮಿಸಬೇಕು ಎಂದು ಪಟ್ಟು ಹಿಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವೆ ಉಮಾಶ್ರೀ, ಕೂಡಲ ಸಂಗಮ ಪ್ರಾಧಿಕಾರ, ಬಸವ ಕಲ್ಯಾಣ ಪ್ರಾಧಿಕಾರಗಳು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದು, ರಚನಾತ್ಮಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೂ ಚಾಲುಕ್ಯ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರಕ್ಕೆ ಸ್ಥಳೀಯ ಜನಪ್ರತಿನಿಧಿಗಳನ್ನು ನೇಮಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಸಭಾಪತಿ ಡಿ.ಎಚ್.ಶಂಕರಮೂರ್ತಿ ವಿಧೇಯಕವನ್ನು ಸದನದಲ್ಲಿ ಮಂಡಿಸಿ ಅನುಮೋದಿಸಿದರು.





