ಕದಿರೇಶ್ ಹತ್ಯೆ ಪ್ರಕರಣದ ತನಿಖೆ ಚುರುಕು: ರಾಮಲಿಂಗಾರೆಡ್ಡಿ

ಬೆಂಗಳೂರು, ಫೆ.8: ಬಿಜೆಪಿ ಮುಖಂಡ, ಪಾಲಿಕೆಯ ಮಾಜಿ ಸದಸ್ಯ ಕದಿರೇಶ್ ರೌಡಿಶೀಟರ್ ಆಗಿದ್ದು, ಅವರ ವಿರುದ್ಧ ಎರಡು ಕೊಲೆ, ಎರಡು ಕೊಲೆ ಯತ್ನ, ಮೂರು ಹಲ್ಲೆ, 13-14 ಕ್ರಿಮಿನಲ್ ಪ್ರಕರಣಗಳಿವೆ. ಯಾವ ಕಾರಣಕ್ಕೆ ಅವರ ಹತ್ಯೆಯಾಗಿದೆ ಎಂಬುವುದು ತನಿಖೆ ಪೂರ್ಣಗೊಂಡ ಬಳಿಕ ತಿಳಿಯುತ್ತದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಣೆ ನೀಡಿದರು.
ಗುರುವಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕ ಆರ್.ಅಶೋಕ್ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ರಾಜಕೀಯ ಕಾರಣಕ್ಕೆ ಈ ಹತ್ಯೆ ನಡೆದಿದೆಯೋ ಅಥವಾ ವೈಯಕ್ತಿಕ ಕಾರಣಕ್ಕಾಗಿ ಹತ್ಯೆ ನಡೆದಿದೆಯೋ ಎಂಬುದು ತನಿಖೆ ಪೂರ್ಣಗೊಂಡ ಬಳಿಕವಷ್ಟೇ ತಿಳಿಯಲಿದೆ ಎಂದರು.
ಶಿವರಾತ್ರಿ ಹಬ್ಬದ ಸಿದ್ಧತೆಗಳನ್ನು ಪರಿಶೀಲಿಸಲು ದೇವಸ್ಥಾನದ ಬಳಿ ಬಂದಾಗ ಹತ್ಯೆ ನಡೆದಿದೆ. ಹತ್ಯೆ ಮಾಡಿದ ಆರೋಪಿಗಳ ಪತ್ತೆಗೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ಹಿಡಿದು ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.
ದಾಸರಹಳ್ಳಿಯಲ್ಲಿ ಗೋವಿಂದೆಗೌಡ ಎಂಬವರನ್ನು ಕೊಲೆ ಮಾಡಲಾಗಿತ್ತು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಇಬ್ಬರು ರಾಜಕೀಯ ಮುಖಂಡರ ಕೊಲೆಯಾಗಿವೆ ಎಂದ ಅವರು, ಶಾಸಕರು, ಸಂಸದರ ಶಿಫಾರಸ್ಸಿನ ಮೇಲೆ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡದಂತೆ ಅಶೋಕ್ ಮನವಿ ಮಾಡಿದ್ದಾರೆ ಎಂದರು.
ಪೊಲೀಸರ ವರ್ಗಾವಣೆಯನ್ನು ಪಿಇಬಿ ಮೂಲಕ ಮಾಡಲಾಗುತ್ತದೆ. ಅಶೋಕ್ ಅವರು ಗೃಹ ಸಚಿವರಾಗಿದ್ದರು. ಅವರ ಕಾಲದಲ್ಲಿ ಹೇಗೆ ಅಧಿಕಾರಿಗಳ ವರ್ಗಾವಣೆ ನಡೆಯುತ್ತಿತ್ತೋ, ನಮ್ಮ ಅವಧಿಯಲ್ಲೂ ಅದೇ ರೀತಿ ನಡೆಯುತ್ತಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಅಶೋಕ್, ಹಾಡುಹಗಲೇ ರೌಡಿಗಳು ಹೊಡೆದಾಡುತ್ತಿದ್ದಾರೆ. ಸರಕಾರ ಹಾಗೂ ಪೊಲೀಸ್ ಅಧಿಕಾರಿಗಳ ಕುರಿತು ಕ್ರಿಮಿನಲ್‌ಗಳಲ್ಲಿ ಭಯ ಮೂಡಿಸುವ ಪ್ರಯತ್ನ ಮಾಡಿ. ಸಿಸಿಬಿಯಲ್ಲಿ ವಿಶೇಷ ಪಡೆಯನ್ನು ರಚಿಸುವುದಾಗಿ ಘೋಷಣೆ ಮಾಡಿ. ಇಬ್ಬರು ಗೃಹ ಸಚಿವರು ವಿಫಲರಾಗಿದ್ದರಿಂದ ಮುಖ್ಯಮಂತ್ರಿ ನಿಮಗೆ ಜವಾಬ್ದಾರಿ ನೀಡಿದ್ದಾರೆ ಎಂದರು.
ನಮ್ಮ ಸರಕಾರದಲ್ಲಿನ ಹಿಂದಿನ ಇಬ್ಬರೂ ಗೃಹ ಸಚಿವರು ಉತ್ತಮವಾಗಿ ಕೆಲಸ ಮಾಡಿದ್ದರಿಂದಲೇ ಅಪರಾಧ ಪ್ರಕರಣಗಳ ಪ್ರಮಾಣ ಇಳಿಮುಖವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂಬುದನ್ನು ನಿನ್ನೆಯಷ್ಟೇ ಅಂಕಿ ಅಂಶಗಳ ಸಮೇತ ಸದನದಲ್ಲಿ ವಿವರಣೆ ಒದಗಿಸಿದ್ದೇನೆ ಎಂದು ಅವರು ಹೇಳಿದರು.
ಅಪರಾಧ ಶೂನ್ಯ ವಾತಾವರಣ ನಿರ್ಮಾಣ ಸಾಧ್ಯವಿಲ್ಲ: ಅಪರಾಧ ಶೂನ್ಯ ವಾತಾವರಣ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಅದು ಸಾಧ್ಯವಾಗುವುದಾಗಿದ್ದರೆ ಸುಪ್ರೀಂಕೋರ್ಟ್, ಹೈಕೋರ್ಟ್, ಐಪಿಸಿ, ನ್ಯಾಯಾಧೀಶರು, ವಕೀಲರು ಎಲ್ಲ ಯಾಕೆ ಬೇಕಾಗಿತ್ತು. ಆದರೂ, ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಎನ್‌ಸಿಆರ್‌ಬಿ ವರದಿ ಪ್ರಕಾರ ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ಅಪರಾಧ ಪ್ರಕರಣಗಳ ಪ್ರಮಾಣವು ಶೇ.7 ರಿಂದ ಶೇ.6ರಷ್ಟಿತ್ತು. ನಮ್ಮ ಸರಕಾರದ ಅವಧಿಯಲ್ಲಿ ಈಗ ಶೇ.5ರಷ್ಟಿದೆ. ಪೊಲೀಸ್ ಅಧಿಕಾರಿಗಳು ಖಡಕ್ ಆಗಿದ್ದಾಗ ಮಾತ್ರ ಅಪರಾಧಗಳನ್ನು ನಿಯಂತ್ರಿಸಲು ಸಾಧ್ಯ ಎಂದು ಅವರು ಹೇಳಿದರು.
ಇತ್ತೀಚೆಗಷ್ಟೇ ಬೆಂಗಳೂರು ನಗರದ ಎಲ್ಲ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್, ಎಸಿಪಿ, ಡಿಸಿಪಿ ಹಾಗೂ ನಗರ ಪೊಲೀಸ್ ಆಯುಕ್ತರ ಸಭೆಯನ್ನು ನಡೆಸಿ, ಕಾನೂನು ಸುವ್ಯವಸ್ಥೆ ಕಾಪಾಡಲು ಕೈಗೊಳ್ಳಬೇಕಾದ ಎಲ್ಲ ಸೂಚನೆಗಳನ್ನು ನೀಡಲಾಗಿದೆ. ನಿಮ್ಮ ಠಾಣೆಗಳ ವ್ಯಾಪ್ತಿಯಲ್ಲಿ ನೀವಿರಿ ಅಥವಾ ರೌಡಿಗಳಿರಲಿ ಎಂಬ ಸಂದೇಶವನ್ನು ರವಾನಿಸಲಾಗಿದೆ. ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಲು ಗೂಂಡಾ ಕಾಯ್ದೆ ಬಳಕೆಗೆ ಹಿಂದೆ ಮುಂದೆ ನೋಡದಂತೆಯೂ ಸೂಚಿಸಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.







