ಕೋತಿ ಬೋನಿಗೆ ಬೀಳಿಸಿಕೊಳ್ಳಲು ಕಡ್ಲೆಕಾಯಿ ಇಟ್ಟಿರುತ್ತಾರೆ..!

ಬೆಂಗಳೂರು, ಫೆ. 8: ಬಿಜೆಪಿ ಪ್ರತಿಪಾದಿಸುವ ಶ್ರೇಣೀಕೃತ ಚಾರ್ತುವರ್ಣ ವ್ಯವಸ್ಥೆಯನ್ನು ಯಾವುದೇ ಕಾರಣಕ್ಕೂ ಒಪ್ಪುವ ಪ್ರಶ್ನೆಯೇ ಇಲ್ಲ. ಎಲ್ಲ ಮನುಷ್ಯರು ಒಗ್ಗಟ್ಟಿನಿಂದ ಬದುಕಬೇಕೆಂಬ ಸಿದ್ಧಾಂತದಲ್ಲಿ ನಂಬಿಕೆ ಇರುವವನು ನಾನು ಎಂದು ಆರೋಗ್ಯ ಸಚಿವ ರಮೇಶ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡುತ್ತಿದ್ದ ವೇಳೆ, ಈ ಸರಕಾರ ಘೋಷಿಸಿದ ಸಾಲವನ್ನು ಮುಂದೆ ನಮ್ಮ (ಬಿಜೆಪಿ) ಸರಕಾರ ಅಧಿಕಾರಕ್ಕೆ ಬಂದಾಗ ತೀರಿಸುತ್ತೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್‌ಕುಮಾರ್, ‘ನಿಮಗೆ ಆ ಕಷ್ಟ ಬರಬಾರದೆಂದು, ನಾವೇ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ’ ಎಂದು ತಿರುಗೇಟು ನೀಡಿದರು.
ಈ ಹಂತದಲ್ಲಿ ಎದ್ದುನಿಂತ ಬಿಜೆಪಿಯ ಲಕ್ಷ್ಮಣ ಸವದಿ, ‘ನಾವೇ ಅಧಿಕಾರಕ್ಕೆ ಬರುವುದು ನಿಶ್ಚತವಾಗಿರುವ ಹಿನ್ನೆಲೆಯಲ್ಲಿ ರಮೇಶ್‌ಕುಮಾರ್ ನಮ್ಮ ಪಕ್ಷಕ್ಕೆ ಬರಲಿದ್ದಾರೆ’ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ರಮೇಶ್‌ಕುಮಾರ್, ‘ಕೋತಿ ಬೋನಿಗೆ ಬೀಳಿಸಿಕೊಳ್ಳಲು ಕಡ್ಲೆಕಾಯಿ ಇಟ್ಟಿರುತ್ತಾರೆ, ಕಡ್ಲೆಕಾಯಿ ಆಸೆಗೆ ನೀವೆಲ್ಲ ಬೋನಿಗೆ (ಬಿಜೆಪಿ) ಬಿದ್ದಿದ್ದೀರಿ’ ಎಂದರು.
ನೀವೆಲ್ಲ ಆರೆಸೆಸ್ಸ್ ತತ್ವ-ಸಿದ್ಧಾಂತದವರಲ್ಲ. ಪ್ರಧಾನಿ ಮೋದಿ ಒಂದು ಸಮಾಜದಲ್ಲಿ ಹುಟ್ಟಿದ್ದಾರೆ. ಆದರೆ, ಜಾತಿಯೇ ಬೇರೆ, ವರ್ಗವೇ ಬೇರೆ. ಪರಿಶಿಷ್ಟ ಜಾತಿಯ ಶ್ರೀಮಂತ ಹಾಗೂ ಮೇಲ್ಜಾತಿಯ ಶ್ರೀಮಂತ ಬ್ರಾಹ್ಮಣ ಇಬ್ಬರದ್ದು ಒಂದೇ ವರ್ಗ. ಹೀಗಾಗಿ ‘ವರ್ಗ ವ್ಯವಸ್ಥೆ’ ತೊಲಗಬೇಕು ಎಂದು ಪ್ರತಿಪಾದಿಸಿದರು.
ಬೆವರು(ರಕ್ತ) ಒಬ್ಬರದ್ದು ಊಟ ಮತ್ತೊಬ್ಬರದ್ದು ಎಂದು ಆಗಬಾರದು. ಬೆವರಿಗೆ ಬೆಲೆ ಇಲ್ಲದ ಸಮಾಜ ನಾಗರಿಕ ಸಮಾಜವೇ ಅಲ್ಲ. ಹೀಗಾಗಿ ನನ್ನ ನಂಬಿಕೆಯನ್ನು ನನ್ನ ಪಕ್ಷ ಒಪ್ಪದೆ ಇರಬಹುದು. ಆದರೆ, ನನ್ನ ಸಿದ್ಧಾಂತ ಎಂದಿಗೂ ಬದಲಾಗದು ಎಂದು ರಮೇಶ್ ಕುಮಾರ್, ಬಿಜೆಪಿ ಸದಸ್ಯರ ಕಾಲೆಳೆದರು.







