ಫೆ.9ರಂದು ಸ್ವಚ್ಛತಾ ರಾಯಭಾರಿಗಳಿಗೆ ಪ್ರತಿಜ್ಞಾವಿಧಿ ಬೋಧನೆ
ಮಂಗಳೂರು, ಫೆ. 8: ರಾಮಕೃಷ್ಣ ಮಿಷನ್‌ನ ಸ್ವಚ್ಛತಾ ಅಭಿಯಾನ ಯೋಜನೆಯಲ್ಲಿ ಹೆಸರು ನೋಂದಾಯಿಸಿಕೊಂಡಿರುವ 12 ಸಾವಿರ ವಿದ್ಯಾರ್ಥಿಗಳಲ್ಲಿ ಕಲಿಕೆ ಹಾಗೂ ಆಸಕ್ತಿಯನ್ನು ಗಮನಿಸಿ ಸುಮಾರು 500 ವಿದ್ಯಾರ್ಥಿಗಳನ್ನು ಸ್ವಚ್ಛತಾ ರಾಯಭಾರಿಗಳು ಎಂದು ಆಯ್ಕೆ ಮಾಡಲಾಗಿದೆ.
ಆಯ್ಕೆಯಾದ ಸ್ವಚ್ಛತಾ ರಾಯಭಾರಿಗಳಿಗೆ ಫೆ.9ರಂದು ಬೆಳಗ್ಗೆ 9:30ಕ್ಕೆ ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮ ಹಾಗೂ ಸ್ವಚ್ಛತೆಯ ಕುರಿತಂತೆ ವಿಶೇಷ ಮಾಹಿತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಲಂಡನ್ ರಾಮಕೃಷ್ಣ ವೇದಾಂತ ಸೊಸೈಟಿಯ ಮುಖ್ಯಸ್ಥ ಸ್ವಾಮಿ ಸರ್ವಸ್ಥಾನಂದಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ರಾಯಭಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಆಶಯ ನುಡಿಗಳನ್ನಾಡಲಿದ್ದಾರೆ.
ಎಂಆರ್‌ಪಿಎಲ್ ಜನರಲ್ ಮ್ಯಾನೆಜರ್ ಹರೀಶ್ ಬಾಳಿಗಾ ಸ್ವಚ್ಛತಾ ಮಂಥನ ಎಂಬ ಕೈಪಿಡಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ರೂಪಾಕ್ಷ ದೇವರಮನೆ ಉಡುಪಿ ಹಾಗೂ ಪ್ರೋ ರಘೋತ್ತಮ ರಾವ್ ಬೆಂಗಳೂರು ಅವರು ಭಾಗವಹಿಸಿ ಸಂವಾದ ನಡೆಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ರಾಮಕೃಷ್ಣ ಮಿಷನ್ ಮಂಗಳೂರಿನಲ್ಲಿ ಕಳೆದ ಮೂರು ವರ್ಷಗಳಿಂದಲೂ ಅಧಿಕ ಸವಯದಿಂದ ಸ್ವಚ್ಛತಾ ಅಭಿಯಾನ ನಡೆಸಿಕೊಂಡು ಬರುತ್ತಿದೆ. ನಿತ್ಯ ಸ್ವಚ್ಛ ಮಂಗಳೂರು, ರವಿವಾರ ಸ್ವಚ್ಛತಾ ಶ್ರಮದಾನ, ಸ್ವಚ್ಛ ದಕ್ಷಿಣ ಕನ್ನಡ ಹಾಗೂ ಸ್ವಚ್ಛ ಮನಸ್ಸು ಎಂಬ ಯೋಜನೆಗಳಲ್ಲಿ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ, ಶಾಲಾ ವಿದ್ಯಾರ್ಥಿಗಳಿಗಾಗಿ ನಡೆಯುತಿರುವ ಸ್ವಚ್ಛ ಮನಸ್ಸು ಅಭಿಯಾನ ಪ್ರಮುಖವಾಗಿ ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಸುಮಾರು 115 ಶಾಲೆಗಳಲ್ಲಿ 60 ಜನ ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಈ ಅಭಿಯಾನ ನಡೆಯುತ್ತಿದೆ. ಸುಮಾರು ಹನ್ನೆರಡು ಸಾವಿರ ವಿದ್ಯಾರ್ಥಿಗಳು ಈ ಯೋಜನೆಯಲ್ಲಿ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ನವೆಂಬರ್, ಡಿಸೆಂಬರ್ ಹಾಗೂ ಜನವರಿಯ ಮೂರೂ ತಿಂಗಳಲ್ಲಿ ಕ್ರಮವಾಗಿ ಸ್ವಚ್ಛತಾ ಚಿಂತನ, ಸ್ವಚ್ಛತಾ ಸ್ಪರ್ಧೆ ಹಾಗೂ ಸ್ವಚ್ಛತಾ ದಿವಸ್ ಎಂಬ ಕಾರ್ಯಕ್ರಮಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ 12 ಸಾವಿರ ವಿದ್ಯಾರ್ಥಿಗಳಲ್ಲಿ ಕಲಿಕೆ ಹಾಗೂ ಆಸಕ್ತಿಯನ್ನು ಗಮನಿಸಿ ಸುಮಾರು 500 ವಿದ್ಯಾರ್ಥಿಗಳನ್ನು ಸ್ವಚ್ಛತಾ ರಾಯಭಾರಿಗಳು ಎಂದು ಆಯ್ಕೆ ಮಾಡಲಾಗಿದೆ.
ಈ ಕುರಿತು ಈಗಾಗಲೇ ಸಂಬಂಧಪಟ್ಟ ಶಾಲಾ ಮುಖ್ಯಸ್ಥರನ್ನು ಸಂಪರ್ಕಿಸಿ ಮಾತಿ ನೀಡಲಾಗಿದೆ. ಸುಮಾರು ಐನೂರಕ್ಕೂ ಅಧಿಕ ವಿದ್ಯಾರ್ಥಿಗಳು ದೃಢಪಡಿಸಿ ಹೆಸರುಗಳನ್ನು ನೋಂದಾಯಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.







