ಮಠಮಾನ್ಯಗಳ ಮೇಲೆ ಸರಕಾರದ ಕಣ್ಣೇಕೆ: ಜಗದೀಶ್ ಶೆಟ್ಟರ್

ಬೆಂಗಳೂರು, ಫೆ.8: ರಾಜ್ಯ ಸರಕಾರವು ಮಠಗಳು, ಮಠಗಳಿಗೆ ಸೇರಿದ ದೇವಸ್ಥಾನಗಳು, ಮಠಗಳ ನಿಯಂತ್ರಗಳಿಗೆ ಒಳಪಟ್ಟ ಧಾರ್ಮಿಕ ಸಂಸ್ಥೆಗಳನ್ನು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯ್ದೆಯಡಿಯಲ್ಲಿ ತರುವ ಸಂಬಂಧ ಮುಜುರಾಯಿ ಇಲಾಖೆ ಆಯುಕ್ತರು ಜ.29ರಂದು ಹೊರಡಿಸಿದ್ದ ಸುತ್ತೋಲೆಗೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರಕಾರವು ಹಿಂದೂ ದೇವಸ್ಥಾನ ಹಾಗೂ ಮಠಮಾನ್ಯಗಳ ಮೇಲೆ ಯಾಕೆ ಕಣ್ಣು ಹಾಕಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದರು.
ಒಂದು ವರ್ಗದ ತುಷ್ಟೀಕರಣಕ್ಕಾಗಿ ಇಂತಹ ಪ್ರಯತ್ನಗಳನ್ನು ಸರಕಾರ ಮಾಡುವುದು ಬೇಡ. ಇದರಿಂದಾಗಿ, ಸಮಾಜದಲ್ಲಿನ ವ್ಯವಸ್ಥೆಯೆ ಹಾಳಾಗುತ್ತದೆ. ಮುಜರಾಯಿ ಇಲಾಖೆಯಿಂದ ಹೊರಡಿಸಲಾಗುವ ಸುತ್ತೋಲೆ ಬಗ್ಗೆ ಮುಖ್ಯಮಂತ್ರಿ ಹಾಗೂ ಮುಜರಾಯಿ ಸಚಿವರ ಗಮನಕ್ಕೆ ಬರುವುದಿಲ್ಲವೇ? ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಅದನ್ನು ಹಿಂಪಡೆಯಲಾಗಿದೆ ಎಂದು ಅವರು ಟೀಕಿಸಿದರು.
ರಾಜ್ಯದಲ್ಲಿ ಚುನಾವಣೆಯ ವಾತಾವರಣ ಬಂದಿದೆ. ಈ ಸರಕಾರದ ಅವಧಿಯಲ್ಲಿ 80 ಸಾವಿರ ಕೋಟಿ ರೂ.ಗಳು ಖರ್ಚಾಗದೆ ಹಾಗೆಯೇ ಉಳಿದಿದೆ. ಅಧಿಕಾರಿಗಳು ಸಚಿವರ ಮಾತನ್ನೇ ಕೇಳುತ್ತಿರಲಿಲ್ಲ. ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ನಿಮ್ಮ ಮಾತುಗಳಿಗೆ ಮಾನ್ಯತೆಯೆ ಇಲ್ಲದಂತಾಗುತ್ತದೆ ಎಂದು ಶೆಟ್ಟರ್ ಟೀಕಿಸಿದರು.
ಸಚಿವರ ಗೈರು: ಹಿರಿಯ ಸಚಿವರಾದ ಕಾಗೋಡು ತಿಮ್ಮಪ್ಪ ಇಷ್ಟು ವಯಸ್ಸಾಗಿದ್ದರೂ ಸದನದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಕ್ರಿಯಾಶೀಲರಾಗಿರುತ್ತಾರೆ. ಇತರ ಸಚಿವರಿಗೆ ಜವಾಬ್ದಾರಿಯಿಲ್ಲವೇ ಎಂದು ಅವರು ಪ್ರಶ್ನಿಸಿದರು.
ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಸಲ್ಲಿಸಲು ಈ ಸದನ ಯಾಕೆ ಬೇಕು ಎಂದು ಜಗದೀಶ್ ಶೆಟ್ಟರ್ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಜೆಡಿಎಸ್ ಶಾಸಕ ವೈಎಸ್‌ವಿ ದತ್ತ, ಈ ಸರಕಾರ ಐದು ವರ್ಷಗಳನ್ನು ಪೂರೈಸುತ್ತಿದೆ. ಇಲ್ಲಿ ಕೇವಲ ರಾಜ್ಯಪಾಲರ ಭಾಷಣಕ್ಕೆ ವಂದನಾರ್ಪಣಾ ಸಲ್ಲಿಸುವುದಷ್ಟೇ ಅಲ್ಲ, ಸರಕಾರಕ್ಕೂ ವಂದನೆ ಸಲ್ಲಿಸುವ ಸಮಯ ಬಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಪೀಕರ್ ಪೀಠದಲ್ಲಿ ಆಸೀನರಾಗಿದ್ದ ಉಪ ಸಭಾಧ್ಯಕ್ಷ ಶಿವಶಂಕರೆಡ್ಡಿ, ರಾಜ್ಯ ಸರಕಾರದ ಮುಖ್ಯಸಚೇತಕ ಅಶೋಕ್‌ಪಟ್ಟಣ್‌ರನ್ನು ಸಂಬಂಧಪಟ್ಟ ಸಚಿವರನ್ನು ಸದನಕ್ಕೆ ಕರೆಸುವಂತೆ ಸೂಚಿಸಿದರು.
ಜಗದೀಶ್ ಶೆಟ್ಟರ್ ಮಾತು ಆರಂಭಿಸಿದಾಗ ಸದನದಲ್ಲಿ ಸಚಿವರಾದ ಕಾಗೋಡು ತಿಮ್ಮಪ್ಪ, ರಾಮಲಿಂಗಾರೆಡ್ಡಿ, ಡಾ.ಗೀತಾ ಮಹದೇವಪ್ರಸಾದ್ ಹೊರತುಪಡಿಸಿ ಬೇರೆ ಯಾರೂ ಇಲ್ಲದೆ ಇದ್ದದ್ದನ್ನು ಗಮನಿಸಿ ಜಗದೀಶ್ ಶೆಟ್ಟರ್ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.







