ಜಂಕ್ ಫುಡ್ ಜಾಹೀರಾತುಗಳನ್ನು ನಿಷೇಧಿಸುವ ಬಗ್ಗೆ ಕೇಂದ್ರ ಸರಕಾರ ಹೇಳಿದ್ದೇನು?

ಹೊಸದಿಲ್ಲಿ, ಫೆ.8: ದೂರದರ್ಶನದಲ್ಲಿ ಜಂಕ್ ಫುಡ್ ಜಾಹೀರಾತುಗಳನ್ನು ನಿಷೇಧಿಸುವ ಯಾವುದೇ ಪ್ರಸ್ತಾವ ಸರಕಾರದ ಮುಂದಿಲ್ಲ ಎಂದು ಗುರುವಾರದಂದು ಸರಕಾರ ಸ್ಪಷ್ಟಪಡಿಸಿದೆ. ಮತ್ತೊಂದೆಡೆ, ಮಕ್ಕಳ ವಾಹಿನಿಗಳಲ್ಲಿ ಅತಿಹೆಚ್ಚಿನ ಕೊಬ್ಬಿನಾಂಶ ಹೊಂದಿರುವ ಉತ್ಪಾದನೆಗಳ ಜಾಹೀರಾತುಗಳನ್ನು ನೀಡದಿರಲು ಒಂಬತ್ತು ಬೃಹತ್ ಆಹಾರ ಉದ್ಯಮ ಸಂಸ್ಥೆಗಳು ನಿರ್ಧರಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಭಾರತೀಯ ಆಹಾರ ಮತ್ತು ಪಾನೀಯ ಒಕ್ಕೂಟದಂಥ ಸಂಸ್ಥೆಗಳು ಈಗಾಗಲೇ ಮಕ್ಕಳಿಗೆ ಸಂಬಂಧಿಸಿದ ಆಹಾರ ಮತ್ತು ಪಾನೀಯಗಳ ಜಾಹೀರಾತುಗಳ ಮೇಲೆ ಸ್ವಯಂಪ್ರೇರಿತವಾಗಿ ನಿರ್ಬಂಧ ಹೇರಲು ನಿರ್ಧರಿಸಿವೆ ಎಂದು ಮಾಹಿತಿ ಮತ್ತು ಪ್ರಸಾರ ರಾಜ್ಯ ಸಚಿವರಾದ ರಾಜ್ಯವರ್ಧನ ಸಿಂಗ್ ರಾಥೋಡ್ ತಿಳಿಸಿದ್ದಾರೆ.
ಟಿ.ವಿಯಲ್ಲಿ ಜಂಕ್ ಫುಡ್ ಮತ್ತು ತಂಪು ಪಾನೀಯಗಳ ಜಾಹೀರಾತುಗಳ ಮೇಲೆ ನಿಷೇಧ ಹೇರುವ ಪ್ರಸ್ತಾವ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಹಿತಿ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿ, ಸದ್ಯಕ್ಕಂತೂ ಅಂಥ ಯಾವುದೇ ಪ್ರಸ್ತಾವ ಇಲ್ಲ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಕೊಬ್ಬಿನಾಂಶ, ಸಕ್ಕರೆ ಮತ್ತು ಉಪ್ಪು ಹೊಂದಿರುವ ಆಹಾರಗಳ ಬಗ್ಗೆ ಪರಿಶೀಲನೆ ನಡೆಸುವ ಸಲುವಾಗಿ ಭಾರತೀಯ ಆಹಾರ ಮತ್ತು ಮಾನದಂಡಗಳ ಮಂಡಳಿಯು ತಜ್ಞರ ತಂಡವನ್ನು ರಚಿಸಿತ್ತು. ಈ ತಂಡವು ನೀಡಿದ ವರದಿಯಲ್ಲಿ ಮಕ್ಕಳ ವಾಹಿನಿಗಳಲ್ಲಿ ಅಥವಾ ಮಕ್ಕಳ ಕಾರ್ಯಕ್ರಮದ ಸಮಯದಲ್ಲಿ ಜಂಕ್ ಫುಡ್ ಜಾಹೀರಾತುಗಳ ಮೇಲೆ ನಿಷೇಧ ಹೇರಬೇಕೆಂದು ಸಲಹೆ ನೀಡಿತ್ತು.







