ಹಣ ವಂಚನೆ: ಲಾಲೂ ಪುತ್ರಿ ಮಿಸಾ ಭಾರತಿ, ಪತಿಗೆ ಸಮನ್ಸ್

ಪಟ್ನಾ, ಫೆ.8: ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾ ಭಾರತಿ ಮತ್ತಾಕೆಯ ಪತಿಯನ್ನು ಆರೋಪಿ ಎಂದು ಪರಿಗಣಿಸಿ ಹೊಸದಿಲ್ಲಿಯ ವಿಶೇಷ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ.
ಮಿಸಾ ಭಾರತಿ ಮಾಲಕತ್ವದ ಮಿಶೈಲ್ ಪ್ಯಾಕರ್ಸ್ ಆ್ಯಂಡ್ ಪ್ರಿಂಟರ್ಸ್ ಸಂಸ್ಥೆಗೂ ಸಮನ್ಸ್ ಜಾರಿ ಮಾಡಿರುವ ನ್ಯಾಯಾಲಯ ಎಲ್ಲ ಆರೋಪಿಗಳು ಮಾರ್ಚ್ ಐದರ ಒಳಗಾಗಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿದೆ.
ಜಾರಿ ನಿರ್ದೇಶನಾಲಯವು ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ಪರಿಗಣಿಸಿದ ವಿಶೇಷ ನ್ಯಾಯಾಧೀಶರಾದ ಎನ್.ಕೆ. ಮಲ್ಹೋತ್ರಾ ಅವರು ಈ ಆದೇಶವನ್ನು ನೀಡಿದ್ದಾರೆ. ಡಿಸೆಂಬರ್ 23ರಂದು ಜಾರಿ ನಿರ್ದೇಶನಾಲಯವು ತನ್ನ ವಕೀಲರಾದ ನಿತೇಶ್ ರಾಣಾ ಅವರ ಮೂಲಕ ಭಾರತಿ ಮತ್ತಾಕೆಯ ಪತಿ ಶೈಲೇಶ್ ಕುಮಾರ್ ವಿರುದ್ಧ ಅಂತಿನ ವರದಿಯನ್ನು ಸಲ್ಲಿಸಿತ್ತು.
ಹಣ ವಂಚನಾ ತನಿಖೆಗೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯವು ಈ ಹಿಂದೆ ಶೈಲೇಶ್ ದಂಪತಿಗೆ ಸೇರಿದ ದಿಲ್ಲಿಯ ಫಾರ್ಮ್‌ಹೌಸನ್ನು ಜಪ್ತಿ ಮಾಡಿತ್ತು. ಈ ಫಾರ್ಮ್‌ಹೌಸನ್ನು ಮಿಶೈಲ್ ಪ್ಯಾಕರ್ಸ್ ಆ್ಯಂಡ್ ಪ್ರಿಂಟರ್ಸ್ ಹೆಸರಿನಲ್ಲಿ ಖರೀದಿಸಲಾಗಿತ್ತು.
ನಕಲಿ ಕಂಪೆನಿಗಳ ಮೂಲಕ ಹಣ ವಂಚನೆ ನಡೆಸುತ್ತಿದ್ದ ಸಹೋದರರಾದ ಸುರೇಂದ್ರ ಕುಮಾರ್ ಜೈನ್ ಮತ್ತು ವೀರೇಂದ್ರ ಜೈನ್ ಹಾಗೂ ಇತರರ ವಿರುದ್ಧ ನಡೆಸುತ್ತಿದ್ದ ತನಿಖೆಯ ವೇಳೆ ಜಾರಿ ನಿರ್ದೇಶನಾಲಯವು ಮೀಸ ಭಾರತಿಗೆ ಸೇರಿದ ದಿಲ್ಲಿ ಫಾರ್ಮ್‌ಹೌಸ್ ಹಾಗೂ ಇತರ ಸ್ಥಳಗಳ ಮೇಲೆ ದಾಳಿ ನಡೆಸಿತ್ತು.
1.2 ಕೋಟಿ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನ್ ಸಹೋದರರು, ಮಿಸಾ ಭಾರತಿ ಮತ್ತು ಶೈಲೇಶ್ ಹಾಗೂ ರಾಜೇಶ್ ಅಗರ್ವಾಲ್ ಎಂಬ ವ್ಯಕ್ತಿ ಪ್ರಮುಖ ಆರೋಪಿಗಳಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.







