2 ವರ್ಷದ ಮಗುವಿನ ಕೊಲೆ: 14 ವರ್ಷದ ಬಾಲಕ ಪೊಲೀಸ್ ವಶಕ್ಕೆ

ಬೆಂಗಳೂರು, ಫೆ.8: ಎರಡು ವರ್ಷದ ಮಗುವನ್ನು, 14 ವರ್ಷದ ಬಾಲಕನೊರ್ವ ಕೊಲೆ ಮಾಡಿರುವ ಘಟನೆ ಇಲ್ಲಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ನಗರದ ಸೋಲದೇವನಹಳ್ಳಿಯ ಮಹಾರುದ್ರ ಲೇಔಟ್‌ನ ರಾಯಚೂರು ಮೂಲದ ಬಸವರಾಜು ಹಾಗೂ ವೆಂಕಮ್ಮ ದಂಪತಿಯ ವೆಂಕಟೇಶ್(2) ಕೊಲೆಯಾಗಿರುವ ಮಗು ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ 14 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ವಿವರ: ಮಹಾರುದ್ರ ಲೇಔಟ್‌ನ ಅಕ್ಕ-ಪಕ್ಕದ ಮನೆಗಳಲ್ಲಿ, ಕೈಗಾಡಿ ಹೊಟೇಲ್ ಇಟ್ಟುಕೊಂಡಿದ್ದ ಬಸವರಾಜು ಹಾಗೂ ಬಾಗಲಕೋಟೆ ಮೂಲದ ಟೀ ವ್ಯಾಪಾರಿ ಈರಣ್ಣ ವಾಸಿಸುತ್ತಿದ್ದರು. ಈರಣ್ಣನ ಪುತ್ರ 8ನೆ ತರಗತಿ ಓದುತ್ತಿದ್ದು, ಪಾರಿವಾಳಗಳನ್ನು ತನ್ನ ಮನೆಯಲ್ಲಿ ಸಾಕುತ್ತಿದ್ದ. ಈ ವಿಚಾರವಾಗಿ ಅಕ್ಕ-ಪಕ್ಕದಲ್ಲೇ ವಾಸಿಸುತ್ತಿದ್ದ ಕುಟುಂಬಗಳ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಎರಡು ದಿನಗಳ ಹಿಂದಷ್ಟೇ ನಾಯಿಗೆ ಹಾಲು ಹಾಕುವ ಬಟ್ಟಲಿನ ವಿಚಾರವಾಗಿ ಮತ್ತೆ ಜಗಳ ನಡೆದಿದ್ದು, ಎರಡು ಕುಟುಂಬಗಳ ನಡುವೆ ಆಕ್ರೋಶ ಮನೆ ಮಾಡಿತ್ತು. ಈರಣ್ಣ ಮನೆಯಲ್ಲಿ ಸಾಕಿದ ಪಾರಿವಾಳ ಮಂಗಳವಾರ ಮಧ್ಯಾಹ್ನ 1ರ ವೇಳೆ ಕಾಣೆಯಾಗಿದ್ದು, ಅದನ್ನು ಹುಡುಕಿಕೊಂಡು ಹೋಗುತ್ತಿದ್ದಾಗ ಮಗು ವೆಂಕಟೇಶ್ ಅಡ್ಡ ಬಂದಿದ್ದಾನೆ. ಈ ವೇಳೆ ಪಾರಿವಾಳ ತಪ್ಪಿಸಿಕೊಂಡು ಹೋಗಿದೆ ಎನ್ನಲಾಗಿದೆ.
ಇದರಿಂದ ಕೋಪಗೊಂಡ ಬಾಲಕ, ಮಗು ವೆಂಕಟೇಶನನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಸೋಲದೇವನಹಳ್ಳಿ ಪೊಲೀಸರು ಕೃತ್ಯವೆಸಗಿದ ಅಪ್ರಾಪ್ತ ಬಾಲಕನನ್ನು ವಶಕ್ಕೆ ತೆಗೆದುಕೊಂಡು, ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಚೇತನ್‌ಸಿಂಗ್ ತಿಳಿಸಿದ್ದಾರೆ.







