ಎಂಡೋ ಸಂತ್ರಸ್ತರ ಪಟ್ಟಿಯಿಂದ ಕೈಬಿಟ್ಟಿದ್ದ 1618 ಮಂದಿಯ ಸೇರ್ಪಡೆಗೆ ಕ್ರಮ: ಸಚಿವ ಚಂದ್ರಶೇಖರನ್
ಕಾಸರಗೋಡಿನಲ್ಲಿ ಎಂಡೋಸಲ್ಫಾನ್ ಸೆಲ್ ಸಭೆ

ಕಾಸರಗೋಡು, ಫೆ.8: ಕಳೆದ ವರ್ಷ(2017)ದ ಎಪ್ರಿಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ವೈದ್ಯಕೀಯ ಶಿಬಿರದಲ್ಲಿ ಕೈಬಿಡಲಾಗಿದ್ದ 1,618 ಮಂದಿಯನ್ನು ಅರ್ಹರೆಂದು ಗುರುತಿಸಿ ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಗೆ ಸೇರ್ಪಡೆಗೊಳಿಸುವ ಕುರಿತಂತೆ ಮರುಪರಿಶೀಲನೆ ನಡೆಸಲಾಗುವುದು ಎಂದು ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್ ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಎಂಡೋಸಲ್ಫಾನ್ ಸೆಲ್ ಸಭೆಯಲ್ಲಿ ಅವರು ಈ ಭರವಸೆ ನೀಡಿದರು. ವೈದ್ಯ ಕೀಯ ಶಿಬಿರದಲ್ಲಿ 3,997 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದ್ದು, ಈ ಪೈಕಿ 1905 ಮಂದಿಯನ್ನು ಎಂಡೋ ಸಂತ್ರಸ್ತರೆಂದು ಗುರುತಿಸಲಾಗಿತ್ತು. ಆದರೆ ಸರಕಾರ ಅಂತಿಮ ಪಟ್ಟಿ ಬಿಡುಗಡೆಗೊಳಿಸಿದಾಗ ಅದರಲ್ಲಿ 1618 ಮಂದಿಯನ್ನು ಕೈಬಿಟ್ಟು 287 ಮಂದಿಯನ್ನು ಸೇರಿಸ ಲಾಗಿತ್ತು. ಇದು ವಿವಾದ ವಾಗುತ್ತಿದ್ದಂತೆ ಸಚಿವರು ಪಟ್ಟಿಯನ್ನು ಮರು ಪರಿಶೀಲಿಸುವ ಭರವಸೆ ನೀಡಿದ್ದಾರೆ.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಂತ್ರಸ್ತರ ಪಟ್ಟಿ ಪರಿಶೀಲನೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಇನ್ನೆರಡು ತಿಂಗಳೊಳಗೆ ಅಂತಿಮ ಪಟ್ಟಿ ಪೂರ್ಣ ಗೊಳಿಸಲಾಗುವುದು. ಎಲ್ಲಾ ಅರ್ಹರನ್ನು ಸಂತ್ರಸ್ತರ ಪಟ್ಟಿಗೆ ಸೇರ್ಪಡೆಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.
ಜಿಲ್ಲೆಯ ಎಂಡೋ ಸಂತ್ರಸ್ತ ವಲಯದ ಅಜನೂರು, ಬೆಳ್ಳೂರು, ಬದಿಯಡ್ಕ, ಎಣ್ಮಕಜೆ, ಕಳ್ಳಾರ್, ಕಾರಡ್ಕ, ಕಯ್ಯೂರ್ ಚೀಮೇನಿ, ಕುಂಬ್ಡಾಜೆ, ಮುಳಿಯಾರು, ಪನತ್ತಡಿ ಮತ್ತು ಪುಲ್ಲೂರು ಪೆರಿಯ ಗ್ರಾಪಂಗಳಲ್ಲಿ ಅರ್ಹ ಎಂಡೋ ಸಂತ್ರಸ್ತರನ್ನು ಗುರುತಿಸಲಾಗುವುದು. ಇದಕ್ಕಾಗಿ ಗ್ರಾಪಂಗಳಲ್ಲಿ ಶಿಬಿರಗಳನ್ನು ಆಯೋಜಿಸಲಾಗುವುದು. ಗ್ರಾಪಂ ಅಧ್ಯಕ್ಷರ ಸಮ್ಮುಖದಲ್ಲಿ ಅಗತ್ಯ ದಾಖಲೆಗಳ ಪರಿಶೀಲನೆ ನಡೆಸಿ ಅರ್ಹರನ್ನು ಗುರುತಿಸಲಾಗುವುದು. ಜಿಲ್ಲಾ ಯೋಜನಾಧಿಕಾರಿಗಳಿಗೆ ಈ ಬಗ್ಗೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಅವರು ವಿವರಿಸಿದರು.
ಸಂತ್ರಸ್ತರಿಗೆ ಲಭಿಸಬೇಕಾದ ಸವಲತ್ತುಗಳನ್ನು ಒದಗಿಸಲು ಸರಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಎಂಡೋ ದುಷ್ಪರಿಣಾಮದಿಂದ ಮೃತಪಟ್ಟ 234 ಮಂದಿಯ ಕುಟುಂಬದ ಆಶ್ರಿತರಿಗೆ ಧನಸಹಾಯ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಇದುವರೆಗೆ 418 ಮಂದಿಗೆ ಪರಿಹಾರ ಒದಗಿಸಲಾಗಿದೆ. ಸಾಲ ಮರು ಪಾವತಿ ಕಾಲಾವಧಿ ವಿಸ್ತರಿಸಲಾಗಿದೆ ಎಂದು ಸಚಿವ ಚಂದ್ರಶೇಖರನ್ ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಎನ್.ಎ.ನೆಲ್ಲಿಕುನ್ನು, ಕೆ. ಕುಂಞಿರಾಮನ್, ಎಂ.ರಾಜಗೋಪಾಲ್, ಜಿ.ಪಂ. ಅಧ್ಯಕ್ಷ ಎ.ಜಿ.ಸಿ. ಬಶೀರ್, ಜಿಲ್ಲಾಧಿಕಾರಿ ಕೆ. ಜೀವನ್ ಬಾಬು, ಕಂದಾಯಾಧಿಕಾರಿ ಸಿ.ಬಿಜು, ಸಿ.ಪಿ.ಅಬ್ದುರ್ರಹ್ಮಾನ್ ಮೊದಲಾದವರು ಉಪಸ್ಥಿತರಿದ್ದರು.
ಎಂಡೋ ಸಂತ್ರಸ್ಥರಿಂದ ಪ್ರತಿಭಟನೆ
ಎಂಡೋ ಸೆಲ್ ಸಭೆ ಆರಂಭವಾಗುತ್ತಿದ್ದಂತೆ ಸಭಾಂಗಣಕ್ಕೆ ನುಗ್ಗಿದ್ದ ನೂರಕ್ಕೂ ಅಧಿಕ ಸಂತ್ರಸ್ತರು ಮತ್ತು ಅವರ ತಾಯಂದಿರು ಎಂಡೋ ಸಂತ್ರಸ್ತರ ಬಗ್ಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ಸೆಲ್ ಸಭೆಯಲ್ಲಿ ಪಾಲ್ಗೊಳ್ಳಲು ತಮಗೂ ಅವಕಾಶ ನೀಡುವಂತೆ ಪ್ರತಿಭಟನಕಾರರು ಪಟ್ಟು ಹಿಡಿದರು. ಈ ವೇಳೆ ಮಾತನಾಡಿದ ಸಚಿವ ಚಂದ್ರಶೇಖರನ್, ಇದು ಅಧಿಕಾರಿ ಮತ್ತು ಆಯ್ದ ಜನಪ್ರತಿನಿಧಿಗಳನ್ನು ಒಳಗೊಂಡ ಸೆಲ್ ಸಭೆ. ಆದುದರಿಂದ ಸಂತ್ರಸ್ತರಿಗೆ ಪಾಲ್ಗೊಳ್ಳಲು ಅವಕಾಶ ಇಲ್ಲ. ಇದು ಕೇವಲ ಅವಲೋಕನ ಸಭೆ ಮಾತ್ರ ಎಂದು ಸಚಿವರು ತಿಳಿ ಹೇಳಿದರು.
ಈ ನಡುವೆ ಸೆಲ್ ಅಧಿಕಾರಿಗಳು ಮತ್ತು ಸಂತ್ರಸ್ತರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಬಳಿಕ ಪೊಲೀಸರು ಮತ್ತು ಅಧಿಕಾರಿಗಳು ಮಧ್ಯ ಪ್ರವೇಶಿಸಿ ಸಭಾಂಗಣದಿಂದ ಪ್ರತಿಭಟನಕಾರರನ್ನು ಹೊರಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಈ ಹಿನ್ನೆಲೆಯಲ್ಲಿ ಸಭೆಯು ಒಂದು ಗಂಟೆ ವಿಳಂಬಗೊಂಡಿತು.
ಎಂಡೋ ಸಂತ್ರಸ್ತರು ಜ.30ರಂದು ತಿರುವನಂತಪುರ ಸೆಕ್ರಟರಿಯೇಟ್ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಬೇಡಿಕೆ ಈಡೇರಿಸದಿದ್ದಲ್ಲಿ ಫೆಬ್ರವರಿಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಧರಣಿ ನಡೆಸುವುದಾಗಿ ಘೋಷಿಸಿದ್ದರು. ಈ ನಡುವೆ ಧರಣಿ ನಿರತನ್ನು ಭೇಟಿಯಾಗಿದ್ದ ಸಚಿವ ಇ.ಚಂದ್ರ ಶೇಖರನ್ ಶೀಘ್ರವೇ ಕಾಸರಗೋಡಿನಲ್ಲಿ ಎಂಡೋ ಸಂತ್ರಸ್ತರ ಸಭೆ ಕರೆಯುವುದಾಗಿ ಭರವಸೆ ನೀಡಿದ್ದರು. ಆದರೆ ಒಂದು ವಾರ ಕಳೆದರೂ ಸಂತ್ರಸ್ತರ ಸಭೆ ಕರೆಯದೆ ಇಂದು ಸೆಲ್ ಸಭೆ ನಡೆಸಿದ್ದು, ಪ್ರತಿಭಟನಕಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ಹಿನ್ನೆಲೆಯಲ್ಲಿ ಇಂದು ಪ್ರತಿಭಟನೆ ನಡೆಸಿದ್ದರು.







