ಪಾಕ್ ಉಗ್ರನ ಪರಾರಿಗೆ ನೆರವಾಗಿದ್ದ 6 ಜನರ ಸೆರೆ
ಶ್ರೀನಗರ ಆಸ್ಪತ್ರೆಯ ಮೇಲೆ ದಾಳಿ ಪ್ರಕರಣ

ಶ್ರೀನಗರ.ಫೆ.8: ಮಹತ್ವದ ಸಾಧನೆಯೊಂದರಲ್ಲಿ ಜಮ್ಮು-ಕಾಶ್ಮೀರ ಪೊಲೀಸರು ಬಂಧಿತ ಪಾಕಿಸ್ತಾನಿ ಉಗ್ರ ನವೀದ್ ಜಟ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ಸಂದರ್ಭದಲ್ಲಿ ಆತ ಪೊಲೀಸರ ವಶದಿಂದ ಪರಾರಿಯಾಗಲು ನೆರವಾಗಿದ್ದರೆನ್ನಲಾದ ಕನಿಷ್ಠ ಆರು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬುಧವಾರ ರಾತ್ರಿ ದಕ್ಷಿಣ ಕಾಶ್ಮೀರದ ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಮಂಗಳವಾರ ಪೊಲೀಸರು ವೈದ್ಯಕೀಯ ತಪಾಸಣೆಗಾಗಿ ಸೆಂಟ್ರಲ್ ಜೈಲಿನಿಂದ ಕೈದಿಗಳನ್ನು ಇಲ್ಲಿಯ ಶ್ರೀ ಮಹಾರಾಜಾ ಹರಿಸಿಂಗ್ ಆಸ್ಪತ್ರೆಗೆ ಕರೆತಂದಿದ್ದಾಗ ಉಗ್ರರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಜಟ್ ಪೊಲೀಸರ ವಶದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಈ ದಾಳಿಯಲ್ಲಿ ಇಬ್ಬರು ಪೊಲೀಸರು ಕೊಲ್ಲಲ್ಪಟ್ಟಿದ್ದರು.
ಪರಾರಿಯ ನಂತರ ಜಟ್ ಅಡಗಿಕೊಂಡಿದ್ದ ದ.ಕಾಶ್ಮೀರದ ಮನೆಯ ಮೇಲೂ ದಾಳಿಯನ್ನು ನಡೆಸಲಾಗಿತ್ತು. ಆದರೆ ಆತ ಕೇವಲ 10 ನಿಮಿಷಗಳ ಮೊದಲು ಅಲ್ಲಿಂದ ತಪ್ಪಿಸಿಕೊಂಡಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು. ಜಟ್ ಆಸ್ಪತ್ರೆಯಿಂದ ಪರಾರಿಯಾಗಲು ಬಳಸಿದ್ದ ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತನ್ಮಧ್ಯೆ ಜಮ್ಮು-ಕಾಶ್ಮೀರ ಸರಕಾರವು ಸೆಂಟ್ರಲ್ ಜೈಲಿನ ಅಧೀಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸಿದ್ದು, ಅವರ ವಿರುದ್ಧ ವಿಚಾರಣೆ ಬಾಕಿಯಿದೆ.
ಜಟ್ ಮತ್ತು ಆತನ ಪರಾರಿಗೆ ನೆರವಾಗಿದ್ದ ಉಗ್ರರು ಸುರಕ್ಷಿತ ತಾಣವನ್ನು ಸೇರಿಕೊಂಡಿದ್ದಾರೆ ಎಂದು ಹಿಝ್ಬುಲ್ ಮುಜಾಹಿದೀನ್‌ನ ಕಾರ್ಯಾಚರಣೆ ಕಮಾಂಡರ್ ರಿಯಾಝ್ ನಾಯ್ಕಾ ಬುಧವಾರ ರಾತ್ರಿ ಆಡಿಯೊ ಸಂದೇಶವೊಂದರಲ್ಲಿ ತಿಳಿಸಿದ್ದಾನೆ.
ಪಾಕಿಸ್ತಾನದ ಮುಲ್ತಾನ್‌ನ ವೇಹರಿ ಜಿಲ್ಲೆಯ ಚಾಕ್ ನಂ.421ರ ನಿವಾಸಿಯಾಗಿರುವ ಜಟ್‌ನನ್ನು 2014ರಲ್ಲಿ ಕುಲ್ಗಾಮ್‌ನಲ್ಲಿ ಬಂಧಿಸಲಾಗಿತ್ತು. ಆಗ ಲಷ್ಕರ್‌ನ ಜಿಲ್ಲಾ ಕಮಾಂಡರ್ ಆಗಿದ್ದ ಆತ ನಂತರ ಭದ್ರತಾ ಪಡೆಗಳ ಕಾರ್ಯಾಚರಣೆಗಳಲ್ಲಿ ಮೃತಪಟ್ಟಿರುವ ಲಷ್ಕರ್‌ನ ಕಾಶ್ಮೀರ ಮುಖ್ಯಸ್ಥನಾಗಿದ್ದ ಅಬು ಕಾಸಿಂ ಮತ್ತು ಅಬು ದುಜಾನಾ ನಿಕಟವರ್ತಿಯಾಗಿದ್ದ. 2011ರಲ್ಲಿ ಲಷ್ಕರ್‌ಗೆ ಸೇರ್ಪಡೆಗೊಂಡಿದ್ದ ಜಟ್ 2012, ಅಕ್ಟೋಬರ್‌ನಲ್ಲಿ ಭಾರತದೊಳಗೆ ನುಸುಳಿದ್ದ. ಪುಲ್ವಾಮಾದಲ್ಲಿ 2013ರಲ್ಲಿ ನಡೆದಿದ್ದ ಮೂರು ಕೊಲೆಗಳಲ್ಲಿ ಆತ ಭಾಗಿಯಾಗಿದ್ದ ಮತ್ತು ಕಾಶ್ಮೀರದಾದ್ಯಂತ ಹಲವಾರು ಪ್ರಕರಣಗಳಲ್ಲಿ ವಿಚಾರಣೆಯನ್ನೆದುರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಎನ್‌ಕೌಂಟರ್‌ನಲ್ಲಿ ತನ್ನ ಕಮಾಂಡರ್ ಅಬು ಇಸ್ಮಾಯಿಲ್ ಕೊಲ್ಲಲ್ಪಟ್ಟ ನಂತರ ಹಿನ್ನಡೆಯನ್ನು ಕಂಡಿದ್ದ ಲಷ್ಕರ್‌ಗೆ ಜಟ್ ಪರಾರಿ ಸ್ಫೂರ್ತಿಯನ್ನು ನೀಡಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದವು. ಮೂವರು ‘ಅಬು’ಗಳ ಸಾವಿನ ಬಳಿಕ ನಿಷ್ಕ್ರಿಯವಾಗಿರುವ ದಕ್ಷಿಣ ಕಾಶ್ಮೀರದಲ್ಲಿನ ಲಷ್ಕರ್‌ನ ವಿಶಾಲ ಜಾಲವು ಜಟ್ ಪರಾರಿಯಿಂದ ಕ್ರಿಯಾಶೀಲಗೊಳ್ಳಲಿದೆ ಎಂದು ಪೊಲೀಸರು ನಿರೀಕ್ಷಿಸಿದ್ದಾರೆ.
ತನ್ನ ಬಂಧನಕ್ಕೆ ಮೊದಲು ಎರಡು ವರ್ಷಗಳ ಕಾಲ ದಕ್ಷಿಣ ಕಾಶ್ಮೀರದಲ್ಲಿ ಸಕ್ರಿಯನಾಗಿದ್ದ ಜಟ್ ಈಗಲೂ ಅಲ್ಲಿಯೇ ಎಲ್ಲಿಯಾದರೂ ಬಚ್ಚಿಟ್ಟಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.







