ಫೆ.10ರಿಂದ ಉಡುಪಿಯಲ್ಲಿ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನ

ಉಡುಪಿ, ಫೆ.8: ಜಿಲ್ಲಾಡಳಿತ, ಜಿಲ್ಲಾ ತೋಟಗಾರಿಕೆ, ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು ಹಾಗೂ ಉಡುಪಿ ಜಿಲ್ಲಾ ಕೃಷಿಕ ಸಮಾಜದ ಸಹ ಯೋಗದಲ್ಲಿ ದೊಡ್ಡಣ್ಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದ ರೈತ ಸೇವಾ (ಪುಷ್ಪ ಹರಾಜು) ಕೇಂದ್ರದ ಆವರಣದಲ್ಲಿ ಫೆ.10ರಿಂದ 12 ರವರೆಗೆ ಉಡುಪಿ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ ಹಾಗೂ ರೈತ ದಿನಾಚರಣೆ ನಡೆಯಲಿದೆ ಎಂದು ಉಡುಪಿ ಜಿಪಂನ ಸಿಇಒ ಶಿವಾನಂದ ಕಾಪಸಿ ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ಉಡುಪಿ ಜಿಪಂ ಸಭಾಂಗಣದಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ಉಡುಪಿಯಲ್ಲಿ ಮೂರನೇ ಬಾರಿಗೆ ನಡೆಯಲಿರುವ ಈ ಪ್ರದರ್ಶನವನ್ನು ರಾಜ್ಯಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಫೆ.10ರ ಅಪರಾಹ್ನ 3 ಗಂಟೆಗೆ ಉದ್ಘಾಟಿಸಲಿದ್ದಾರೆ ಎಂದರು.
ಜಿಪಂ ಅಧ್ಯಕ್ಷ ದಿನಕರಬಾಬು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಪಂ ಉಪಾದ್ಯಕ್ಷೆ ಶೀಲಾ ಕೆ.ಶೆಟ್ಟಿ, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರೆ, ಕೃಷಿ ಮತ್ತು ತೋಟಗಾರಿಕಾಇಲಾಖೆಗಳ ಅಧಿಕಾರಿಗಳು, ವಿಜ್ಞಾನಿಗಳು ಭಾಗವಹಿಸಲಿದ್ದಾರೆ.
ಮೂರು ದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಹಲವು ಆಕರ್ಷರ್ಣೆಗಳಿದ್ದು, ಇವುಗಳಲ್ಲಿ 12 ಅಡಿ ಎತ್ತರದ ಕೆಂಪು, ಬಿಳಿ, ಹಳದಿ, ಗುಲಾಬಿ ಬಣ್ಣದ 3000 ಗುಲಾಬಿ ಹೂವುಗಳು ಹಾಗೂ 75ಕೆ.ಜಿ. ಚೆಂಡು ಮತ್ತು ಸೇವಂತಿಗೆ ಪುಷ್ಪಗಳಿಂದ ರಚಿಸಲ್ಪಡುವ ಶಿವಲಿಂಗ ಮೂರ್ತಿ ಪ್ರಧಾನ ಆಕರ್ಷಣೆಯಾಗಲಿದೆ ಎಂದ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ತಿಳಿಸಿದರು.
ಅಲ್ಲದೇ 3600 ಜರ್ಬೆರಾ ಹೂವುಗಳಿಂದ ಅಲಂಕೃತಗೊಳ್ಳಲಿರುವ ಐದು ಅಡಿ ಎತ್ತರದ ನಂದಿ ಮೂರ್ತಿ, ವಿವಿಧ ಬಗೆಯ, ಬಣ್ಣದ ಹೂವುಗಳಿಂದ ನಿರ್ಮಿಸಲಾಗುವ ಆನೆ, ಚಿಟ್ಟೆ, ಹುಲಿಗಳು ಸೇರಿದಂತೆ ವಿವಿಧ ಪ್ರಾಣಿಗಳ ಪ್ರದರ್ಶನವೂ ಇರಲಿದೆ ಎಂದರು.
ವರ್ಟಿಕಲ್ ಗಾರ್ಡನ್, ವಿವಿಧ ಜಾತಿಯ ಪಾಪಾಸು ಕಳ್ಳಿಗಳ ಅಲಂಕಾರಿಕ ಜೋಡಣೆ, ಅಲಂಕಾರಿಕ ಪುಷ್ಪಕುಂಡಗಳು ಪ್ರದರ್ಶನಗೊಳ್ಳಲಿವೆ. ಅಲ್ಲದೇ ಇಲಾಖಾ ದರದಲ್ಲಿ ಹೂ-ಹಣ್ಣು- ತರಕಾರಿ ಗಿಡಗಳ ಮಾರಾಟವೂ ನಡೆಯಲಿದೆ. ಜಿಲ್ಲಾ ಕೃಷಿಕ ಸಮಾಜದಿಂದ ಪ್ರಗತಿಪರ ಕೃಷಿಕರಿಗೆ ಸನ್ಮಾನವೂ ನಡೆಯಲಿದೆ ಎಂದು ಭುವನೇಶ್ವರಿ ತಿಳಿಸಿದರು.







