ಮಲೇಶಿಯಾದಿಂದ ಮರಳು ತರಿಸಲು ಬೋಗಸ್ ಕಂಪೆನಿಗೆ ಟೆಂಡರ್: ಜಗದೀಶ್ ಶೆಟ್ಟರ್ ಆರೋಪ

ಬೆಂಗಳೂರು, ಫೆ.8: ರಾಜ್ಯದಲ್ಲಿ ಮರಳಿನ ಕೊರತೆ ನೀಗಿಸಲು ಸರಕಾರವು ಮಲೇಶಿಯಾದಿಂದ ಮರಳು ತರಿಸಲು ಬೋಗಸ್ ಕಂಪೆನಿಗೆ ಟೆಂಡರ್ ನೀಡುವ ಮೂಲಕ ಹಣವನ್ನು ಕೊಳ್ಳೆ ಹೊಡೆಯುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದರು.
ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಲೇಶಿಯಾದಿಂದ ಮರಳು ತಂದು ಜನರನ್ನು ಮರುಳು ಮಾಡುವ ಭಾಗ್ಯವನ್ನು ಸರಕಾರ ನೀಡಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕಿದೆ ಎಂದು ಆಗ್ರಹಿಸಿದರು.
ಪೊಸೈಡಾನ್ ಎಂಬ ಬೋಗಸ್ ಕಂಪನಿಗೆ ಸರಕಾರ ಟೆಂಡರ್ ನೀಡಿದೆ. ಮರಳು ಆಮದು ಮಾಡಿಕೊಳ್ಳುವ ಟೆಂಡರ್ ಕರೆದ ನಂತರ ದುಬೈನಲ್ಲಿ ಈ ಸಂಸ್ಥೆ ನೋಂದಣಿಯಾಗಿದೆ. ಯಾವುದೇ ಅರ್ಹತೆ ಇಲ್ಲದ ಈ ಕಂಪೆನಿಗೆ ಟೆಂಡರ್ ನೀಡುವ ಮೂಲಕ ಸರಕಾರ ಗೋಲ್‌ಮಾಲ್ ಮಾಡಲು ಹೊರಟಿದೆ ಎಂದು ಅವರು ಆರೋಪಿಸಿದರು.
ರಾಜ್ಯ ಸರಕಾರವು 2017ರ ಮೇ 24ರಂದು ಟೆಂಡರ್ ಆಹ್ವಾನಿಸಿದೆ. ಆದರೆ, ಪೊಸೈಡಾನ್ ಕಂಪನಿಯು ಜೂ.18ರಂದು ನೋಂದಣಿಯಾಗಿದೆ. ಈ ಕಂಪೆನಿ ಸರಕಾರಕ್ಕೆ ನೀಡಿರುವ ದೂರವಾಣಿ ಸಂಖ್ಯೆ, ಲೆಟರ್ ಹೆಡ್, ಪೋಸ್ಟ್ ಬಾಕ್ಸ್ ಸಂಖ್ಯೆ ಎಲ್ಲವೂ ಬೇರೆ ಬೇರೆ ಕಂಪೆನಿಗಳಿಗೆ ಸೇರಿದ್ದಾಗಿದೆ ಎಂದು ಜಗದೀಶ್ ಶೆಟ್ಟರ್ ದೂರಿದರು.
ಮಲೇಶಿಯಾದಿಂದ ಆಮದು ಮಾಡಿಕೊಳ್ಳುವ ಮರಳಿನ ನಿರ್ವಹಣೆಯನ್ನು ಸರಕಾರದ ಎಂಎಸ್‌ಐಎಲ್‌ಗೆ ವಹಿಸಲಾಗಿದೆ. ಮಲೇಶಿಯಾದಿಂದ ಮಂಗಳೂರಿನ ಬಂದರಿಗೆ ಬರುವವರೆಗೆ ಎಲ್ಲ ವೆಚ್ಚ ಸೇರಿ 50 ಕೆ.ಜಿ.ಮರಳಿಗೆ 107.90 ರೂ.ಗಳಾಗುತ್ತದೆ. ಆದರೆ, ಎಂಎಸ್‌ಐಎಲ್ 200 ರೂ.ಗಳಿಗೆ ಮಾರಾಟ ಮಾಡುವುದಾಗಿ ಪ್ರಕಟಿಸಿದೆ. ವ್ಯತ್ಯಾಸದ ಹಣ 92.10 ರೂ. ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಅವರು ಆಗ್ರಹಿಸಿದರು.
ಈ ದುಡ್ಡಿನಲ್ಲಿ ಯಾರಿಗೆ ಎಷ್ಟು ಪರ್ಸೆಂಟೇಜ್ ಹೋಗುತ್ತದೆ. ಈ ರೀತಿಯ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡೆ ಪ್ರಧಾನಿ ನರೇಂದ್ರಮೋದಿ ನಿಮ್ಮ ಸರಕಾರವನ್ನು ‘ಪರ್ಸೆಂಟೇಜ್ ಸರಕಾರ’ ಎಂಂದಿರುವುದು. ಕೇವಲ ಎಂಎಸ್‌ಐಎಲ್‌ಗೆ ಜವಾಬ್ದಾರಿ ನೀಡುವ ಬದಲು ಖಾಸಗಿಯವರಿಗೂ ಅವಕಾಶ ನೀಡಿದ್ದರೆ, ದರ ಸಮರದಲ್ಲಿ ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ಮರಳು ಸಿಗುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು.
ಪ್ರತಿ ವರ್ಷಕ್ಕೆ 36 ಲಕ್ಷ ಟನ್‌ನಂತೆ ಈ ಕಂಪೆನಿ ಐದು ವರ್ಷಗಳಿಗೆ 180 ಲಕ್ಷ ಟನ್ ಮರಳು ಪೂರೈಸುವ ಗುತ್ತಿಗೆ ಪಡೆದಿದೆ. ಈ ಐದು ವರ್ಷಗಳಲ್ಲಿ ಮರಳಿನ ವಹಿವಾಟು 7020 ಕೋಟಿ ರೂ.ಗಳಾಗುತ್ತದೆ. ಇಷ್ಟೊಂದು ದೊಡ್ಡ ಪ್ರಮಾಣದ ವಹಿವಾಟಿನಲ್ಲಿ ಗೋಲ್‌ಮಾಲ್ ನಡೆಯುವ ಸಾಧ್ಯತೆಯಿದೆ ಎಂದು ಜಗದೀಶ್ ಶೆಟ್ಟರ್ ಆರೋಪಿಸಿದರು.
ಮಲೇಶಿಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಮರಳಿನ ಗುಣಮಟ್ಟದ ಕುರಿತು ಪರೀಕ್ಷೆ ನಡೆಸಲಾಗಿದೆಯೇ? 50 ಕೆ.ಜಿ. ಬ್ಯಾಗ್‌ಗಳಲ್ಲಿ ಮಾರಾಟ ಮಾಡುವ ಅಗತ್ಯವೇನಿತ್ತು? 50 ಕೆ.ಜಿ.ಗೆ 200 ರೂ.ಗಳಾದರೆ ಒಂದು ಟ್ರಕ್ ಮರಳಿಗೆ 40 ಸಾವಿರ ರೂ.ಗಳಾಗುತ್ತದೆ. ಹುಬ್ಬಳ್ಳಿಯಲ್ಲಿ 25-30 ಸಾವಿರ ರೂ.ಗಳಿಗೆ ಇಲ್ಲಿನ ಮರಳು ಸಿಗುತ್ತದೆ. ಹಾಗಾದರೆ, ಸರಕಾರ ವಿದೇಶದಿಂದ ಮರಳು ತರಿಸುವ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸಿದರು.
ಜಗದೀಶ್ ಶೆಟ್ಟರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ವಿನಯ್ ಕುಲಕರ್ಣಿ, ಇದುವರೆಗೆ 1 ಶಿಪ್‌ಮೆಂಟ್ ಮಾತ್ರ ಬಂದಿದೆ. ಯಾವುದೇ ಹಗರಣ ಆಗಿಲ್ಲ. ಒಂದೂ ಬ್ಯಾಗ್ ಮರಳನ್ನು ಮಾರಾಟ ಮಾಡಿಲ್ಲ. ಈಗ ಕೆಲವು ಖಾಸಗಿ ಕಂಪೆನಿಗಳು ಮರಳು ಆಮದು ಮಾಡಿಕೊಳ್ಳಲು ಮುಂದೆ ಬಂದಿವೆ. ಅವುಗಳಿಗೂ ಪರವಾನಗಿ ನೀಡುವ ಪ್ರಕ್ರಿಯೆ ನಡೆದಿದೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ, ಪೊಸೈಡಾನ್ ಬೋಗಸ್ ಕಂಪನಿಯಾಗಿದ್ದರೆ ದಾಖಲೆ ಕೊಡಿ. ತನಿಖೆ ಮಾಡಿಸಿ ಸದನದ ಮುಂದೆ ಸತ್ಯಾಂಶ ಇಡಲಾಗುವುದು. ಮಲೇಶಿಯಾ ಮರಳು ಬಂದಿರುವುದೇ ಒಂದು ಶಿಪ್‌ಮೆಂಟ್. ಇದರಲ್ಲಿ 7020 ಕೋಟಿ ರೂ.ಅವ್ಯವಹಾರ ಆಗಲು ಹೇಗೆ ಸಾಧ್ಯ? ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಆರೋಪ ಮಾಡುವುದು ಸರಿಯಲ್ಲ. ಹುಬ್ಬಳ್ಳಿಯಲ್ಲಿ 20 ಸಾವಿರ ರೂ.ಗೆ ಟನ್ ಸಿಕ್ಕರೆ 40 ಸಾವಿರ ರೂ. ನೀಡಿ ಜನ ಏಕೆ ಖರೀದಿಸುತ್ತಾರೆ. ಅವರಿಗೇನು ಹುಚ್ಚು ಹಿಡಿದಿದೆಯೇ ಎಂದು ತಿರುಗೇಟು ನೀಡಿದರು.







