ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರೆಂದು ಪರಿಗಣಿಸಲು ಒತ್ತಾಯಿಸಿ ಧರಣಿ

ಬೆಂಗಳೂರು, ಫೆ.8: ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರೆಂದು ಪರಿಗಣಿಸಿ ಸೇವಾನಿಯಮಾವಳಿ ರೂಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಂದಾಯ ಇಲಾಖಾ ಗ್ರಾಮ ಸಹಾಯಕರ ಸಂಘದ ವತಿಯಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ನಗರದ ಸಿಟಿ ರೈಲು ನಿಲ್ದಾಣದಿಂದ ಸ್ವಾತಂತ್ರ ಉದ್ಯಾನವನದವರೆಗೂ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ಡಿ ದರ್ಜೆಯ ನೌಕರರು ಎಂದು ಪರಿಗಣಿಸಬೇಕು, ಸೇವಾ ನಿಯಮಾವಳಿ ರೂಪಿಸಬೇಕು ಎಂದು ಘೋಷಣೆಗಳು ಕೂಗಿ ಸರಕಾರವನ್ನು ಆಗ್ರಹಿಸಿದರು.
2007ರಲ್ಲಿ ಗ್ರಾಮ ಸಹಾಯಕರ 10,450 ಹುದ್ದೆಗಳನ್ನು ಖಾಯಂಗೊಳಿಸಲಾಗಿದೆ. ಆದರೆ, ಇದುವರೆಗೆ ಹುದ್ದೆಗೆ ತಕ್ಕಂತೆ ಮೂಲ ವೇತನ ಪರಿಷ್ಕರಣೆಯಾಗಿಲ್ಲ. ಈ ಕುರಿತು ಹಲವು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ರಾಜ್ಯ ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಮುದ್ದುೃಷ್ಣ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಸಹಾಯಕರು ಗ್ರಾಮೀಣ ಪ್ರದೇಶದಲ್ಲಿ 10 ಸಾವಿರ ರೂ.ಗಳಿಂದ ಅತ್ಯಂತ ದುಸ್ತರವಾದ ಜೀವನ ನಡೆಸುತ್ತಿದ್ದಾರೆ. ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿದ್ದರೂ, ಸರಕಾರ ನಮ್ಮ ವೇತನ ಹೆಚ್ಚಳ ಮಾಡುತ್ತಿಲ್ಲ. ಅಲ್ಲದೆ, ನಮ್ಮ ಮಕ್ಕಳ ವಿದ್ಯಾಭ್ಯಾಸ, ಶಿಕ್ಷಣವನ್ನು ಸುಧಾರಿಸಲು ಕಷ್ಟಕರವಾಗುತ್ತಿದೆ ಎಂದು ಅವರು ಹೇಳಿದರು.
ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ನೀಡುವ ಸಂಬಂಧ 2013 ರ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸುವರ್ಣಸೌಧಕ್ಕೆ ಪಾದಯಾತ್ರೆ ಮಾಡಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರು ಎಂದು ಪರಿಗಣಿಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮುದ್ದುಕೃಷ್ಣ ಕಿಡಿಕಾರಿದರು.







