ಒಂದೇ ದಿನದಲ್ಲಿ ಕೋಟ್ಯಾಧಿಪತಿಗಳಾದ 31 ಕುಟುಂಬ

ತವಾಂಗ್, ಫೆ. 8: ಅರುಣಾಚಲಪ್ರದೇಶದ ತವಾಂಗ್ ಜಿಲ್ಲೆಯ ಬೋಮ್ಜಾ ಗ್ರಾಮದಲ್ಲಿ 31 ಕುಟುಂಬಗಳು ಒಂದೇ ದಿನದಲ್ಲಿ ಕೋಟ್ಯಾಧಿಪತಿಗಳಾಗಿ ಬದಲಾಗಿದ್ದಾರೆ. ಪ್ರಮುಖ ಘಟಕವೊಂದನ್ನು ಆರಂಭಿಸಲು ಭಾರತೀಯ ಸೇನೆ ಐದು ವರ್ಷಗಳ ಹಿಂದೆ ಭೂಮಿ ಸ್ವಾಧೀನಪಡಿಸಿ ಕೊಂಡಿತ್ತು. ಆದರೆ, ಆಗ ಪರಿಹಾರ ನೀಡಿರಲಿಲ್ಲ. ಬುಧವಾರ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮಾ ಖಂಡು ಪರಿಹಾರ ಧನ ವಿತರಿಸಿದರು.
ಚೀನ ಗಡಿ ಜಿಲ್ಲೆಯಲ್ಲಿರುವ ತವಾಂಗ್ ಗ್ಯಾರಿಸನ್‌ನಲ್ಲಿ 200 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇದಕ್ಕಾಗಿ ರಕ್ಷಣಾ ಸಚಿವಾಲಯ ಒಟ್ಟು 40.80 ಕೋ. ರೂ. ಬಿಡುಗಡೆ ಮಾಡಿದ್ದು, ಅದನ್ನು ಬುಧವಾರ ವಿತರಿಸಲಾಯಿತು.
ಸಮಾರಂಭದಲ್ಲಿ ಸಂತ್ರಸ್ತ 29 ಕುಟುಂಬಗಳಿಗೆ ತಲಾ 1.09 ಕೋ. ರೂ. ಯ ಚೆಕ್ ಅನ್ನು ಖಂಡು ವಿತರಿಸಿದರು. ಒಂದು ಕುಟುಂಬ 6.73 ಕೋ. ರೂ. ಹಾಗೂ ಇನ್ನೊಂದು ಕುಟುಂಬ 2.45 ಕೋ. ರೂ. ಪರಿಹಾರ ಧನ ಪಡೆಯಿತು.
ಹಣ ಮಂಜೂರು ಮಾಡಿರುವುದಕ್ಕೆ ಮುಖ್ಯಮಂತ್ರಿ ರಕ್ಷಣಾ ಸಚಿವಾಲಯಕ್ಕೆ ವಂದನೆ ಸಲ್ಲಿಸಿದರು. ಸೇನೆ ಸ್ವಾಧೀನ ಪಡಿಸಿಕೊಂಡು ಇದೇ ರೀತಿಯ ಖಾಸಗಿ ಭೂಮಿಗೆ ಪರಿಹಾರ ಧನವನ್ನು ಕೂಡಲೇ ವಿತರಿಸಲಾಗುವುದು ಎಂದು ಅವರು ಹೇಳಿದರು.





