ಪ್ರತ್ಯೇಕ ಕ್ರೈಸ್ತ ಅಭಿವೃದ್ಧಿ ನಿಗಮ ಘೋಷಣೆಗೆ ಆಗ್ರಹಿಸಿ ಫೆ.10 ರಂದು ಧರಣಿ
ಬೆಂಗಳೂರು, ಫೆ.8: ಮುಂದಿನ ಬಜೆಟ್‌ನಲ್ಲಿ ಪ್ರತ್ಯೇಕ ಕ್ರೈಸ್ತ ಅಭಿವೃದ್ಧಿ ನಿಗಮ ಘೋಷಣೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಅಸೋಸಿಯೇಷನ್ ವತಿಯಿಂದ ಫೆ.10 ರಂದು ನಗರದ ಪುರಭವನದ ಎದುರು ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಹ್ಯಾರಿ ಡಿಸೋಜ, ರಾಜ್ಯದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಪ್ರತ್ಯೇಕ ಬಜೆಟ್ ಮಂಡನೆ ಮಾಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸುವ ಪ್ರಯತ್ನ ಸರಕಾರ ಮಾಡಿದೆ. ಆದರೆ, ಅಲ್ಪಸಂಖ್ಯಾತ ಇಲಾಖೆಯಲ್ಲಿ 8 ವಿಭಾಗಗಳಿದ್ದು, ಸರಕಾರ ಹಂಚಿಕೆ ಮಾಡುವ ಬಜೆಟ್‌ನಲ್ಲಿ 6 ವಿಭಾಗದ ಬಜೆಟ್ ಹಣ ಒಂದು ಸಮುದಾಯಕ್ಕೆ ಸಿಗುತ್ತಿದೆ. ಉಳಿದೆರಡರಲ್ಲಿ ಕೇವಲ ಕ್ರೈಸ್ತ, ಬೌದ್ಧ, ಸಿಖ್ ಹಾಗೂ ಇನ್ನಿತರ ಅಲ್ಪಸಂಖ್ಯಾತರಿಗೆ ನೀಡಲಾಗುತ್ತಿದೆ. ಇದರಿಂದಾಗಿ ಕ್ರೈಸ್ತರಿಗೆ ಸಿಗಬೇಕಾದ ಯಾವುದೇ ಸೌಲಭ್ಯ ಹಾಗೂ ಸರಕಾರಿ ಯೋಜನೆಗಳು ತಲುಪುತ್ತಿಲ್ಲ ಎಂದರು.
ಕೈಸ್ತರು ಹಾಗೂ ಅಲ್ಪಸಂಖ್ಯಾತರು ಕೆಲ ವರ್ಗಗಳನ್ನು ಪ್ರವರ್ಗ-1 ಹಾಗೂ ಪ್ರತ್ಯೇಕವಾಗಿ 2 ಬಿ ವರ್ಗಕ್ಕೆ ಸೇರಿಸಿದ್ದಾರೆ. ಆದರೆ, ಕ್ರೈಸ್ತರನ್ನು ಮೇಲ್ವರ್ಗದ ಸಮುದಾಯವಿರುವ ಪ್ರವರ್ಗ 3ಬಿಗೆ ಸೇರಿಸಿದ್ದಾರೆ. ಇದರಿಂದಾಗಿ ಸರಕಾರಿ ಉದ್ಯೋಗ ಹಾಗೂ ಇನ್ನಿತರೆ ಮೀಸಲಾತಿಯಿಂದ ವಂಚಿತರಾಗುತ್ತಿದ್ದೇವೆ. ಈ ವರ್ಗದಲ್ಲಿ 47 ಉಪಜಾತಿಗಳಿದ್ದು, ಕೆಲ ಉಪ ಜಾತಿಗಳು 40-50 ಲಕ್ಷಜನರಿದ್ದಾರೆ. 2011 ರ ಜನಗಣತಿ ಪ್ರಕಾರ ಕ್ರೈಸ್ತ ಸಮುದಾಯಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಅವರು ಹೇಳಿದರು.







