ನಾಳೆಯಿಂದ ಮೋದಿ ಐತಿಹಾಸಿಕ ಫೆಲೆಸ್ತೀನ್ ಪ್ರವಾಸ
ಪ್ರಧಾನಿ ಪಾಲ್ಗೊಳ್ಳಲಿರುವ ಹಲವು ಕಾರ್ಯಕ್ರಮಗಳ ವಿವರ ಇಲ್ಲಿದೆ
ಹೊಸದಿಲ್ಲಿ, ಫೆ.9: ಪ್ರಧಾನಿ ನರೇಂದ್ರ ಮೋದಿ ಶನಿವಾರ ತಮ್ಮ ಐತಿಹಾಸಿಕ ಫೆಲೆಸ್ತೀನ್ ಪ್ರವಾಸ ಆರಂಭಿಸಲಿದ್ದು, ಈ ಸಂದರ್ಭ ರಮಲ್ಲಾಹ್ ದಲ್ಲಿ 100 ಹಾಸಿಗೆಗಳ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ತೆರೆಯುವ ಬಗ್ಗೆ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಅಲ್ಲಿ ಶಾಲೆಗಳನ್ನೂ ತೆರೆಯುವ ಪ್ರಸ್ತಾಪವಿದ್ದು, ಈ ಬಗ್ಗೆ ಶನಿವಾರ ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ.
ಇದು ಮಾನವೀಯ ನೆಲೆಯ ಭೇಟಿಯಾಗಿರುವುದು ಎಂದೂ ಮೂಲಗಳು ತಿಳಿಸಿವೆ. ಶಿಕ್ಷಣ, ಆರೋಗ್ಯ, ಐಟಿ ಹಾಗೂ ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ಒಪ್ಪಂದಗಳಿಗೆ ಸಹಿ ಹಾಕುವ ಸೂಚನೆಯೂ ಇದೆ.
ಮೋದಿ ತಮ್ಮ ಅಧಿಕಾರಿಗಳಿಗೆ 2015ರಲ್ಲಿಯೇ ಫೆಲೆಸ್ತೀನ್ ಭೇಟಿಗೆ ಸಿದ್ಧತೆಗಳನ್ನು ಆರಂಭಿಸುವಂತೆ ಹೇಳಿದ್ದರಲ್ಲದೆ ಭೇಟಿ ಸೂಕ್ತ ಸಮಯದಲ್ಲಿ ನಡೆಯುವುದೆಂದೂ ತಿಳಿಸಿದ್ದರು. ಅದೇ ವರ್ಷ ಫೆಲೆಸ್ತೀನ್ ನ ರಾಯಭಾರಿ ಅಬು ಅದ್ನಾನ್ ಅಲ್ ಹೈಜಾ ಆವರನ್ನು ತಮ್ಮ ನಿವಾಸದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭೇಟಿಯಾಗಿದ್ದ ಪ್ರಧಾನಿ ತಾನು ಫೆಲೆಸ್ತೀನ್ ಗೆ ಭೇಟಿ ನೀಡುವುದಾಗಿಯೂ ಅವರಲ್ಲಿ ತಿಳಿಸಿದ್ದರು.
ಮೋದಿ ಶುಕ್ರವಾರ ಜೋರ್ಡಾನ್ ತಲುಪಲಿದ್ದು, ಅಲ್ಲಿನ ದೊರೆ ಅಬ್ದುಲ್ಲಾ ಅವರನ್ನು ಭೇಟಿಯಾಗಲಿದ್ದಾರೆ. ಶನಿವಾರ ಜೋರ್ಡಾನ್ ನಿಂದ ಮೋದಿ ಹೆಲಿಕಾಪ್ಟರ್ ಮೂಲಕ ರಮಲ್ಲಾಹ್ ತಲುಪಲಿದ್ದು, ಅಲ್ಲಿ ಅವರು ಯಾಸಿರ್ ಅರಾಫತ್ ಮ್ಯೂಸಿಯಂಗೆ ಭೇಟಿ ಕೊಡಲಿದ್ದಾರೆ. ಫೆಲೆಸ್ತೀನ್ ಅಧ್ಯಕ್ಷ ಮಹಮೌದ್ ಅಬ್ಬಾಸ್ ಅವರೊಡನೆ ಮಾತುಕತೆ ನಡೆಸಲಿದ್ದಾರೆ. 2005ರಿಂದೀಚಿಗೆ ಅವರು ಐದು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು. ಅವರು ಕೊನೆಯ ಬಾರಿ ಮೇ 2017ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.