ಗ್ರಾಮ ಸಹಾಯಕರನ್ನು ‘ಡಿ’ಗ್ರೂಪ್ ನೌಕರರೆಂದು ಪರಿಗಣಿಸಲು ಕ್ರಮ: ಕಾಗೋಡು ತಿಮ್ಮಪ್ಪ

ಬೆಂಗಳೂರು, ಫೆ. 9: ರಾಜ್ಯದಲ್ಲಿನ ಗ್ರಾಮ ಸಹಾಯಕರನ್ನು ‘ಡಿ’ ದರ್ಜೆ ನೌಕರರನ್ನಾಗಿ ಪರಿಗಣಿಸುವ ಬಗ್ಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಭರವಸೆ ನೀಡಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ನಿಲುವಳಿ ಸೂಚನೆಯಡಿ ಜೆಡಿಎಸ್ ಸದಸ್ಯ ಎಚ್.ಎಚ್.ಕೋನರೆಡ್ಡಿ ಹಾಗೂ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ಕಲ್ಪಿಸುವ ದೃಷ್ಟಿಯಿಂದ ಅವರನ್ನು ‘ಡಿ’ ಗ್ರೂಪ್ ನೌಕರರೆಂದು ಪರಿಗಣಿಸುವ ಸಂಬಂಧ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ ಎಂದರು.
ಮುಂದಿನ ಆಯವ್ಯಯ ಮಂಡನೆ ಸಂದರ್ಭದಲ್ಲಿ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ಈ ವಿಚಾರದ ಬಗ್ಗೆ ಸರಕಾರ ಗಂಭೀರವಾಗಿ ಪರಿಶೀಲನೆ ಮಾಡಲಿದೆ. ಆದುದರಿಂದ ಗ್ರಾಮ ಸಹಾಯಕರು ಧರಣಿ ಸತ್ಯಾಗ್ರಹವನ್ನು ಕೈಬಿಡಬೇಕೆಂದು ಅವರು ಮನವಿ ಮಾಡಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಕೋನರೆಡ್ಡಿ, ರೈತರ ಜಮೀನಿನಿಂದ ಸರಕಾರಿ ಕಚೇರಿ ವರೆಗೂ ಕೆಲಸ ಮಾಡುವ ಗ್ರಾಮ ಸಹಾಯಕರನ್ನು ಖಾಯಂ ಮಾಡಬೇಕು. ಅವರನ್ನು ‘ಡಿ’ ದರ್ಜೆ ನೌಕರರೆಂದು ಪರಿಗಣಿಸಬೇಕು. ಅವರಿಗೆ ಸೇವಾ ಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಸರಕಾರದ ಬಹುತೇಕ ಕೆಲಸಗಳನ್ನು ಗ್ರಾಮ ಸಹಾಯಕರೇ ನಿರ್ವಹಿಸುತ್ತಾರೆ. ಅವರ ಗೌರವಧನ ಹೆಚ್ಚಳ ಮಾಡಲಾಗಿತ್ತು. ಅವರಿಗೆ ಸೇವಾ ಭದ್ರತೆ ಇಲ್ಲ. ಆದುದರಿಂದ ಅವರಿಗೆ ಸೇವಾ ಭದ್ರತೆ ಕಲ್ಪಿಸಲು ಸರಕಾರ ಕ್ರಮ ವಹಿಸಬೇಕೆಂದು ಕೋರಿದರು.







